Select Your Language

Notifications

webdunia
webdunia
webdunia
webdunia

ಶನಿವಾರ ಪೂರ್ಣ ಚಂದ್ರ ಗ್ರಹಣ : ಯಾವ ರಾಶಿಗೆ ದೋಷ

ಶನಿವಾರ ಪೂರ್ಣ ಚಂದ್ರ ಗ್ರಹಣ : ಯಾವ ರಾಶಿಗೆ ದೋಷ
WD
ಇದೇ ಡಿಸೆಂಬರ್ 10ರ ಶನಿವಾರ ಪೂರ್ಣಿಮೆ ದಿವಸ ಸಂಜೆ, ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 135 ನೇಯದಾಗಿದ್ದು, 71 ಗ್ರಹಣಗಳಲ್ಲಿ ಇದು 23ನೇಯದಾಗಿರುತ್ತದೆ. ಈ ಗ್ರಹಣವು ಭೂಮಿಯ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ.

ಏಷ್ಯಾ ಮತ್ತು ಆಸ್ಟ್ತ್ರೇಲಿಯಾಗಳಲ್ಲಿ ಗ್ರಹಣದ ಎಲ್ಲಾ ಹಂತಗಳನ್ನು ನೋಡಬಹುದು. ಉತ್ತರ ಅಮೇರಿಕಾದಲ್ಲಿ ಗ್ರಸ್ತ ಚಂದ್ರ ಮುಳುಗುವುದರಿಂದ ಪೂರ್ಣ ಗೋಚರಿಸುವುದಿಲ್ಲ. ಯುರೋಪ್ ಮತ್ತು ಆಫ್ರಿಕ ದೇಶಗಳಲ್ಲಿ ಗ್ರಹಣ ಸ್ಪರ್ಶ ಕಾಲ ಕಂಡುಬರುವುದಿಲ್ಲ.

ಗ್ರಸ್ತೌದಿತ ಚಂದ್ರ ಗ್ರಹಣವನ್ನು ವೀಕ್ಷಿಸಬಹುದು. ದಕ್ಷಿಣ ಅಮೇರಿಕಾ ಮತ್ತು ಅಂಟಾರ್ಟಿಕಾದಲ್ಲಿ ಗ್ರಹಣ ಕಂಡುಬರುವುದಿಲ್ಲ. ಸಾಯಂಕಾಲ 5 ಗಂಟೆ 3 ನಿಮಿಷ 32 ಸೆಕೆಂಡ್ ಗೆ ಗ್ರಹಣದ ಸ್ಪರ್ಶಕಾಲ ಉಂಟಾಗುತ್ತದೆ. ಗ್ರಹಣದ ಮಧ್ಯಕಾಲ ರಾತ್ರಿ 8 ಗಂಟೆ 2 ನಿಮಿಷ 56 ಸೆಕೆಂಡು ಗಳು ಗ್ರಹಣದ ಮೋಕ್ಷ ಕಾಲ ರಾತ್ರಿ 11 ಗಂಟೆಗೆ. ಗ್ರಹಣದ ಪರಿಪೂರ್ಣತೆಯ ಅವಧಿ 51 ನಿಮಿಷ 8 ಸೆಕೆಂಡುಗಳು ಗ್ರಹಣದ ಗ್ರಾಸ ಪ್ರಮಾಣ 1.1061 ರಷ್ಟಿರುತ್ತದೆ. ಭಾರತದ ಎಲ್ಲಾ ಭಾಗಗಳಲ್ಲೂ ಈ ಪೂರ್ಣ ಚಂದ್ರಗ್ರಹಣ ಕಂಡುಬರುತ್ತದೆ.


ಭಾರತದಲ್ಲಿ, ಭಾರತೀಯ ಕಾಲಮಾನ, ಸಾಯಂಕಾಲ 6 ಗಂಟೆ 15 ನಿಮಿಷಕ್ಕೆ ಗ್ರಹಣ ಸ್ಪರ್ಶಕಾಲ ಉಂಟಾಗುತ್ತದೆ. ರಾತ್ರಿ 8 ಗಂಟೆ 2 ನಿಮಿಷಕ್ಕೆ ಗ್ರಹಣದ ಮಧ್ಯಕಾಲವಾಗಿರುತ್ತದೆ. ರಾತ್ರಿ 9 ಗಂಟೆ 48 ನಿಮಿಷಕ್ಕೆ ಗ್ರಹಣದ ಮೋಕ್ಷಕಾಲವಾಗಿರುತ್ತದೆ. ಗ್ರಹಣದ ಒಟ್ಟು ಕಾಲ 3 ಗಂಟೆ 33 ನಿಮಿಷಗಳಾಗಿರುತ್ತದೆ. ಗ್ರಹಣದ ಗ್ರಾಸ ಪ್ರಮಾಣ 1.110 ರಷ್ಟಿರುತ್ತದೆ.


ಕರ್ನಾಟಕದಲ್ಲಿ ಗ್ರಸ್ತೌದಿತ ಚಂದ್ರಗ್ರಹಣವನ್ನು ಕಾಣಬಹುದು. ಈ ಗ್ರಹಣವು ವೃಷಭರಾಶಿಯ ರೋಹಿಣಿ ನಕ್ಷತ್ರದ 4ನೇ ಚರಣದಲ್ಲಿ ಪ್ರಾರಂಭವಾಗಿ, ಮೃಗಶಿರ ನಕ್ಷತ್ರದ 1ನೇ ಚರಣದಲ್ಲಿ ಮೋಕ್ಷವಾಗುತ್ತದೆ. ಇದು ಕೇತು ಗ್ರಸ್ತ ಚಂದ್ರಗ್ರಹಣವಾಗಿರುತ್ತದೆ. ಗ್ರಹಣದ ಒಟ್ಟು ಕಾಲ 3 ಗಂಟೆ 33 ನಿಮಿಷಗಳಾಗಿದ್ದು, ಗ್ರಹಣ ಸ್ಪರ್ಶಕಾಲದಿಂದ, ಮೋಕ್ಷ ಕಾಲದವರೆಗೆ ಪುಣ್ಯಕಾಲವಾಗಿರುತ್ತದೆ.

ಪಂಚಾಂಗಗಳ ಪ್ರಕಾರ ಈ ಚಂದ್ರಗ್ರಹಣದ ಫಲ: ಕಟಕ, ಸಿಂಹ, ಧನಸ್ಸು, ಮೀನ ರಾಶಿಯವರಿಗೆ ಶುಭಫಲ, ಮೇಷ, ಕನ್ಯಾ, ವೃಶ್ಚಿಕ, ಮಕರ ರಾಶಿಯವರಿಗೆ ಮಿಶ್ರಫಲ, ವೃಷಭ, ಮಿಥುನ, ತುಲಾ, ಕುಂಭ ರಾಶಿಯವರಿಗೆ ಅಶುಭಫಲ ಉಂಟಾಗುತ್ತದೆ.

ಗ್ರಹಣಾಚರಣೆ ಮಾಡುವವರು ಗ್ರಹಣದ ಸಮಯದಲ್ಲಿ (ಸಂಜೆ 6-15 ರಿಂದ 9-48 ಗಂಟೆಯವರೆಗೆ) ಸ್ನಾನ, ಜಪ, ನಿತ್ಯಕರ್ಮ, ದೇವರ ಪೂಜೆಗಳನ್ನು ಮಾಡಬೇಕು. ಗ್ರಹಣದ ಕಾಲದಲ್ಲಿ ಊಟ ಮಾಡಬಾರದು.

ಈ ಗ್ರಹಣದ ವಿಶೇಷವೇನೆಂದರೆ ಗ್ರಹಣದ ಪ್ರಾರಂಭದಲ್ಲಿ ಚಂದ್ರ ಬೂದು ಬಣ್ಣಕ್ಕಿರುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ ತಾಮ್ರ ಬಣ್ಣವಾಗುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣ ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ ಪೂರ್ಣ ಗ್ರಹಣದಲ್ಲೂ ಚಂದ್ರ ಕೆಂಪಗೆ ಕಾಣಿಸುತ್ತಾನೆ.

ಆಕಾಶ ಕಾಯದಲ್ಲಿ ಸಂಭವಿಸುವ ಗ್ರಹಣಗಳು ಒಂದು ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ. ಅಪರೂಪದ ಚಂದ್ರಗ್ರಹಣದ ವಿಸ್ಮಯ ವಿದ್ಯಮಾನವನ್ನು ಭಾರತದಲ್ಲಿ ವೀಕ್ಷಿಸಬಹುದಾಗಿದೆ. ಬೇಕೆಂದಾಗ ಬಾರದ, ಬಂದಾಗ ಕಳೆದುಕೊಳ್ಳಬಾರದ ಒಂದು ಸುಂದರ ವಿದ್ಯಮಾನ. ಗ್ರಹಣವನ್ನು ವೀಕ್ಷಿಸಿದಲ್ಲಿ, ಮನಸ್ಸಿನಲ್ಲಿ ತೃಪ್ತಿ ಮತ್ತು ನಿಸರ್ಗದ ಬಗ್ಗೆ ಆಸಕ್ತಿ ಮೂಡುತ್ತದೆ. ಗ್ರಹಣದ ಆಧಾರದಿಂದ ರಾಷ್ಟ್ತ್ರದ, ಪಕ್ಷಗಳ ಹಾಗೂ ಪ್ರಮುಖ ರಾಜಕಾರಣಿಗಳ ಆಗು ಹೋಗುಗಳ ಫಲನಿರೂಪಣೆಗೆ ಅನುಕೂಲವಾಗುತ್ತದೆ. ಹೊರತು, ಪ್ರತೀ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಹಣದಿಂದ ಯಾರೂ ಭಯಪಡುವುದು ಬೇಡ. ಗಾಳಿಸುದ್ದಿಗಳಿಗೆ ಕಿವಿಗೊಡದೆ, ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದು.

ಆರ್. ಸೀತಾರಾಮಯ್ಯ,
ಜ್ಯೋತಿಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344

Share this Story:

Follow Webdunia kannada