Select Your Language

Notifications

webdunia
webdunia
webdunia
webdunia

ಭಾನುವಾರ ರಾತ್ರಿ ಪೂರ್ಣ ಸೂರ್ಯ ಗ್ರಹಣ, ಭಾರತದಲ್ಲಿಲ್ಲ!

ಭಾನುವಾರ ರಾತ್ರಿ ಪೂರ್ಣ ಸೂರ್ಯ ಗ್ರಹಣ, ಭಾರತದಲ್ಲಿಲ್ಲ!
, ಶನಿವಾರ, 10 ಜುಲೈ 2010 (17:46 IST)
PTI
ಇದೇ ಭಾನುವಾರ (11 ಜುಲೈ 2010) ಭಾರತೀಯ ಕಾಲಮಾನದಲ್ಲಿ ರಾತ್ರಿ ಪೂರ್ಣ ಸೂರ್ಯ ಗ್ರಹಣ ಸಂಭವಿಸುತ್ತದೆ. ರಾತ್ರಿ ಗ್ರಹಣ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.

ಈ ಪೂರ್ಣ ಸೂರ್ಯ ಗ್ರಹಣವು ಗ್ರಹಣಗಳ ಸಾರೋಸ್ ಸರಣಿಯಲ್ಲಿ 146 ನೇ ಸರಣಿಯಾಗಿದ್ದು ಈ ಸರಣಿಯಲ್ಲಿ ಬರುವ ಒಟ್ಟು 76 ಗ್ರಹಣಗಳಲ್ಲಿ ಇದು 27ನೇಯದಾಗಿದೆ.

ಈ ಗ್ರಹಣವು ಭಾರತೀಯ ಕಾಲಮಾನ ರಾತ್ರಿ 10 ಗಂಟೆ 40 ನಿಮಿಷಕ್ಕೆ ಸ್ಪರ್ಶ (ಪ್ರಾರಂಭ) ವಾಗುತ್ತದೆ. ಗ್ರಹಣ ಮಧ್ಯಕಾಲ, ಮಧ್ಯರಾತ್ರಿ 1 ಗಂಟೆ 4 ನಿಮಿಷ, ಗ್ರಹಣದ ಮೋಕ್ಷಕಾಲ 3 ಗಂಟೆ 27 ನಿಮಿಷಕ್ಕೆ ಉಂಟಾಗುತ್ತದೆ. ಗ್ರಹಣದ ಒಟ್ಟು ಕಾಲ 4 ಗಂಟೆ 47 ನಿಮಿಷಗಳು. ಗ್ರಹಣದ ಗ್ರಾಸ ಪ್ರಮಾಣ 1.059ರಷ್ಟಿರುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿ 5 ನಿಮಿಷ 20.2 ಸೆಕೆಂಡುಗಳು.

ಈ ಸೂರ್ಯ ಗ್ರಹಣದ ಪಥವು ಪೆಸಿಫಿಕ್ ಸಾಗರದ ದಕ್ಷಿಣ ಭಾಗದಲ್ಲಿ ಪ್ರಾರಂಭವಾಗಿ ಆಗ್ನೇಯದಿಂದ, ಈಶಾನ್ಯದ ಕಡೆಗೆ ಚಲಿಸಿ, ಕುಕ್ ಐಲೆಂಡ್ಸ್ ದ್ವೀಪಗಳ ಮುಖಾಂತರ ದಕ್ಷಿಣ ಭಾಗದ ಚಿಲಿ ಮತ್ತು ಅರ್ಜೆಂಟೀನಾ ಮಧ್ಯಭಾಗದವರೆಗೆ ಚಲಿಸಿ ಗ್ರಹಣ ಮುಕ್ತಾಯವಾಗುತ್ತದೆ. ಅರ್ಜೆಂಟೀನಾದ ದಕ್ಷಿಣಭಾಗ, ಬೊಲಿವಿಯಾ, ಬ್ರೆಜಿಲ್, ಚಿಲಿ, ಕುಕ್ ಐಲೆಂಡ್ಸ್, ಫಿಜಿ, ಫ್ರೆಂಚ್ ಪೇಲಿನೇಶಿಯಾ, ಪೆರುಗ್ವೆ, ಪೆರು ಮತ್ತು ಉರುಗ್ವೆಗಳಲ್ಲಿ ಮಾತ್ರ ಪೂರ್ಣ ಸೂರ್ಯಗ್ರಹಣ ಗೋಚರಿಸುತ್ತದೆ. ಸೂರ್ಯ ಗ್ರಹಣದ ಪರಿಪೂರ್ಣತೆಯ ಅವಧಿ, ಅರ್ಜೆಂಟೀನಾದಲ್ಲಿ 2 ನಿಮಿಷ 47 ಸೆಕೆಂಡುಗಳು. ಕುಕ್ ಐಲೆಂಡ್ಸ್‌ನಲ್ಲಿ 3 ನಿಮಿಷ 18 ಸೆಕೆಂಡುಗಳಾಗಿರುತ್ತದೆ.

ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಗ್ರಹಣಾಚರಣೆಯ ಅವಶ್ಯಕತೆಯಿರುವುದಿಲ್ಲ. ಗ್ರಹಣದಿಂದ ಯಾರಿಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಯಾವ ರಾಶಿಯವರು, ಯಾವ ನಕ್ಷತ್ರದವರೂ ಶಾಂತಿ ಮಾಡಿಸುವ ಅವಶ್ಯಕತೆಯಿರುವುದಿಲ್ಲ. ಟಿ.ವಿ. ಮಾಧ್ಯಮದಲ್ಲಿ ಗ್ರಹಣದ ಬಗ್ಗೆ ನೀಡುವ ಮಾಹಿತಿಗಳಿಗೆ ಕಿವಿಗೊಡದಿರುವುದು ಒಳ್ಳೆಯದು.

ಆರ್. ಸೀತಾರಾಮಯ್ಯ, ಶಿವಮೊಗ್ಗ

Share this Story:

Follow Webdunia kannada