Select Your Language

Notifications

webdunia
webdunia
webdunia
webdunia

ಶ್ರೀ ವಿಕೃತಿ ಸಂವತ್ಸರ: ಇಲ್ಲಿದೆ ಹೊಸ ವರ್ಷ ಭವಿಷ್ಯ

ಶ್ರೀ ವಿಕೃತಿ ಸಂವತ್ಸರ: ಇಲ್ಲಿದೆ ಹೊಸ ವರ್ಷ ಭವಿಷ್ಯ
ಆರ್. ಸೀತಾರಾಮಯ್ಯ

ND
ಈ ವರ್ಷ ಚೈತ್ರ ಮಾಸ ಶುಕ್ಲ ಪಕ್ಷ ಪ್ರತಿಪದೆ, ದಿ: 16.3.2010 ನೇ ಮಂಗಳವಾರ ಸೂರ್ಯೋದಯಕ್ಕೆ ವಿಕೃತಿ ಸಂವತ್ಸರ ಪ್ರಾರಂಭವಾಗುತ್ತದೆ.

ಗುರು ಸಂವತ್ಸರದ ಪ್ರಾರಂಭದಿಂದ ಮೇ 2 ರವರೆಗೆ ಕುಂಭ ರಾಶಿಯಲ್ಲಿದ್ದು, ಮೇ 2 ರಂದು ಬೆಳೆಗ್ಗೆ 8 ಗಂಟೆ 7 ನಿಮಿಷಕ್ಕೆ ಮೀನರಾಶಿಗೆ ಪ್ರವೇಶಿಸುತ್ತಾನೆ. ಮೀನರಾಶಿಯಲ್ಲಿ ಜುಲೈ 23 ರಂದು ವಕ್ರಿಯಾಗಿ, ನವೆಂಬರ್ 1 ರಂದು ಕುಂಭರಾಶಿಗೆ ವಾಪಾಸ್ ಬರುತ್ತಾನೆ. ನವೆಂಬರ್ 18 ರಂದು ಋಜುಮಾರ್ಗ ಪಡೆಯುತ್ತಾನೆ. ಒಟ್ಟು 118 ದಿವಸ ವಕ್ರೀಯಾಗಿದ್ದು, ನಂತರ ಡಿಸೆಂಬರ್ 6 ರಂದು ಮೀನರಾಶಿಗೆ ಪ್ರವೇಶಿಸಿ ಸಂವತ್ಸರದ ಕೊನೆವರೆಗೂ ಮೀನರಾಶಿಯಲ್ಲಿರುತ್ತಾನೆ.

ಶನಿ ಸಂವತ್ಸರದ ಪ್ರಾರಂಭದಲ್ಲಿ ಕನ್ಯಾರಾಶಿಯಲ್ಲಿ ವಕ್ರಿಯಾಗಿದ್ದು, ಮೇ 30 ರಂದು ರಾತ್ರಿ 11.39 ನಿಮಿಷಕ್ಕೆ ಋಜುಮಾರ್ಗ ಹೊಂದುತ್ತಾನೆ. ಒಟ್ಟು 137 ದಿವಸ ವಕ್ರಿಯಾಗಿರುತ್ತಾನೆ. ನಂತರ ಸೆಪ್ಟಂಬರ್ 13 ರಿಂದ ಅಕ್ಟೌಬರ್ 15 ರ ಬೆಳಗಿನ ಜಾವದವರೆಗೆ ಒಟ್ಟು 31 ದಿವಸಗಳು ಅಸ್ತನಾಗಿರುತ್ತಾನೆ. ಸಂವತ್ಸರ ಪೂರ್ತಿ ಕನ್ಯಾರಾಶಿಯಲ್ಲಿಯೇ ಮುಂದುವರೆಯುತ್ತಾನೆ. ರಾಹು-ಕೇತುಗಳು ಸಂವತ್ಸರ ಪೂರ್ತಿ ಧನಸ್ಸು ರಾಶಿಯಲ್ಲಿ ರಾಹು, ಮಿಥುನರಾಶಿಯಲ್ಲಿ ಕೇತು ಮುಂದುವರೆಯುತ್ತಾರೆ.

ಈ ಸಂವತ್ಸರದಲ್ಲಿ ತಾರೀಖು 26.6.2010 ರಂದು ಖಂಡಗ್ರಾಸ ಗ್ರಸ್ತೌದಿತ ಚಂದ್ರಗ್ರಹಣ ಸಂಭವಿಸಲಿದ್ದು, ಚಂದ್ರ ಗ್ರಹಣವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ 47 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಮಧ್ಯಕಾಲ ಸಂಜೆ 5 ಗಂಟೆ 9 ನಿಮಿಷವಾಗಿದ್ದು, ಸಂಜೆ 6 ಗಂಟೆ 30 ನಿಮಿಷಕ್ಕೆ ಗ್ರಹಣ ಮೋಕ್ಷವಾಗುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ತಾರೀಖು 11.7.2010 ರಂದು ರಾತ್ರಿ 10 ಗಂಟೆ 40 ನಿಮಿಷಕ್ಕೆ ಖಗ್ರಾಪ ಸೂರ್ಯ ಗ್ರಹಣ ಸಂಭವಿಸಲಿದ್ದು, ರಾತ್ರಿಯಾಗಿರುವುದರಿಂದ ಭಾರತದಲ್ಲಿ ಕಾಣಿಸುವುದಿಲ್ಲ. ತಾರೀಖು 21.12.2010 ರಂದು ಮಧ್ಯಾಹ್ನ 12 ಗಂಟೆ 2 ನಿಮಿಷಕ್ಕೆ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಹಗಲಾದ್ದರಿಂದ ಭಾರತದಲ್ಲಿ ಕಾಣಿಸುವುದಿಲ್ಲ.

ವಿಕೃತಿ ಸಂವತ್ಸರದ ರಾಜ ಕುಜನಾಗಿರುವುದರಿಂದ ಆಹಾರ ವಸ್ತುಗಳು ಮತ್ತು ಉತ್ಪತ್ತಿ ಕಡಿಮೆಯಾಗುತ್ತದೆ. ಮಳೆ ಕಡಿಮೆ, ಬೆಂಕಿಯಿಂದ ಅಪಘಾತಗಳು, ದರೋಡೆ, ಭಯೋತ್ಪಾದನೆ ಹೆಚ್ಚಾಗುತ್ತದೆ. ಸರ್ಕಾರದ ಆಡಳಿತ ವೈಫಲ್ಯಗಳು ಹೆಚ್ಚಾಗುತ್ತದೆ. ಪಿತ್ತ ವಿಕಾರದ ಖಾಯಿಲೆಗಳು ಹೆಚ್ಚಾಗುತ್ತದೆ. ಪ್ರಕೃತಿ ವಿಪತ್ತುಗಳಿಂದ ಜನಭಯಭೀತರಾಗುತ್ತಾರೆ. ಅಪರಾಧಗಳು ಹೆಚ್ಚಾಗುತ್ತದೆ. ವಿಕೃತಿ ಸಂವತ್ಸರದ ಕೊಡುಗೆಯೇನೆಂದರೆ, ಸಹಜವಾದದ್ದು, ವಿಕೃತವಾಗುತ್ತದೆ. ವಿಕೃತವಾದದ್ದು, ಸಹಜವಾಗಿ ಪರಿವರ್ತಿಸುತ್ತದೆ. ಸಜ್ಜನರು ಬಡವರಾಗುತ್ತಾರೆ. ಭೂಮಿಯ ಅಮೂಲ್ಯವಾದ ಸಸ್ಯಗಳಿಂದ ಭರಿತವಾಗಿರುತ್ತದೆ.

ಮಳೆಯ ಬಗ್ಗೆ ವಿಶ್ಲೇಷಣೆ ಮಾಡಿದಾಗ, ವಿಕೃತಿ ಸಂವತ್ಸರದ ರಾಜನು ಕುಜನಾಗಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಮಳೆ ಯಾವ ಪ್ರಮಾಣದಲ್ಲಿರುತ್ತದೆ ಎಂಬುದನ್ನು ಆರಿದ್ರಾ ಪ್ರವೇಶ ಕುಂಡಲಿಯಿಂದ ವಿಶ್ಲೇಷಿಸಬಹುದು. ತಾರೀಖು 22-6-2010 ರಂದು ರವಿಯು ಬೆಳೆಗ್ಗೆ 9 ಗಂಟೆ 57 ನಿಮಿಷಕ್ಕೆ ಆರಿದ್ರಾ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಕಟಕ ಲಗ್ನವಿದ್ದು, ಜಲತತ್ವವಾಗಿದ್ದು, ಚಂದ್ರನು ಭೂ ತತ್ವದಲ್ಲಿದ್ದು, ರವಿಯ ರೇಖಾಂಶಕ್ಕಿಂತ ಕುಜನ ರೇಖಾಂಶವು ಹೆಚ್ಚಾಗಿರುವುದರಿಂದ ಸಕಾಲದಲ್ಲಿ ಮಳೆ ಬರುವುದಿಲ್ಲ ಹಾಗೂ ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ.

ವಿಕೃತಿ ಸಂವತ್ಸರದ ಕುಂಡಲಿಯನ್ನು ಪರೀಶೀಲಿಸಿದಾಗ ಧನಸ್ಸು ಲಗ್ನವಾಗಿದ್ದು, ಲಗ್ನಾಧಿಪತಿ ಗುರು ಕುಂಭರಾಶಿಯಲ್ಲಿದ್ದು, ಕುಜನದೃಷ್ಟಿ ಹೊಂದಿದ್ದು, ಲಗ್ನ-ಸಪ್ತಮದಲ್ಲಿ ರಾಹು-ಕೇತುಗಳಿರುತ್ತಾರೆ. ಮೀನದಲ್ಲಿ ರವಿ ಚಂದ್ರ ಬುಧ, ಶುಕ್ರರಿದ್ದು, ಕಟಕದಲ್ಲಿ ಕುಜನಿದ್ದು, ಕನ್ಯಾದಲ್ಲಿ ಶನಿಯಿರುತ್ತಾನೆ.

ಲಗ್ನಾಧಿಪತಿ ಗುರುವಿಗೆ ಅಷ್ಟಮದಿಂದ ಕುಜನ ದೃಷ್ಟಿಯಿರುವುದರಿಂದ ಹಾಗೂ ಜೂನ್ 26 ರಂದು ಧನಸ್ಸು ರಾಶಿಯಲ್ಲಿ ಚಂದ್ರಗ್ರಹಣ ಜುಲೈ 17 ರಂದು ಕನ್ಯಾರಾಶಿಯಲ್ಲಿ ಸೂರ್ಯಗ್ರಹಣ ಹಾಗೂ ಡಿಸೆಂಬರ್ 21 ರಂದು ಕನ್ಯಾರಾಶಿಯಲ್ಲಿ ಚಂದ್ರಗ್ರಹಣ ಸಂಭವಿಸುವುದರಿಂದ ದೇಶದ ಪ್ರಮುಖ ವ್ಯಕ್ತಿಗೆ ಅತ್ಯಂತ ತೊಂದರೆ ಅಥವಾ ಹತ್ಯೆ ಆಗಬಹುದು. ಬೆಂಕಿ ಅಪಘಾತಗಳು, ರೋಗಗಳು ಹೆಚ್ಚಾಗುತ್ತವೆ. ಆಹಾರ ಪದಾರ್ಥಗಳ ಉತ್ಪನ್ನ ಕಡಿಮೆಯಾಗುತ್ತದೆ. ವಿಮಾನ ಅಪಘಾತ ಹಾಗೂ ರೈಲ್ವೆ ಅಪಘಾತಗಳು ಹೆಚ್ಚಾಗುತ್ತವೆ. ಮೀನರಾಶಿಯಲ್ಲಿ ನಾಲ್ಕು ಗ್ರಹಗಳಿದ್ದು, ಶನಿಯ ದೃಷ್ಟಿಯಿರುವುದರಿಂದ ದೇಶದಲ್ಲಿ ಅತ್ಯುಪಯುಕ್ತ ಅಭಿವೃದ್ದಿ ಕಾರ್ಯಗಳಿಗೆ ನಿಧಾನಗತಿ ಉಂಟಾಗುತ್ತದೆ. ಕಾರ್ಯನೀತಿಗಳು ಸಹಾ ನಿಧಾನಗತಿಯಲ್ಲಿ ಸಾಗುತ್ತವೆ. ಅಷ್ಟಮದಲ್ಲಿ ಕುಜನಿರುವುದರಿಂದ ರಾಷ್ಟ್ತ್ರೀಯ ವಿಪತ್ತುಗಳು ಸಂಭವಿಸುತ್ತದೆ. ಕೈಗಾರಿಕೆ, ಗಣಿ, ಉದ್ಯಮಗಳಲ್ಲಿ ಪ್ರಗತಿ ಕುಂಠಿತವಾಗುತ್ತದೆ. ಜಲಯಾನಗಳಲ್ಲಿ ಅಪಘಾತಗಳು ನೀರಿನಲ್ಲಿ ಸಾವು, ಮಳೆಯ ವೈಪರೀತ್ಯದಿಂದ ಸಾವುಗಳು ಉಂಟಾಗುತ್ತವೆ. ಭಯೋತ್ಪಾದಕ ಕಾರ್ಯಾಚರಣೆ ಹೆಚ್ಚಾಗುತ್ತದೆ. ವಾಣಿಜ್ಯೋದ್ಯಮ ವ್ಯಾಪಾರಸ್ಥರಿಗೆ ತೆರಿಗೆ ಏರಿಕೆಯಿಂದ ಅಸಮಧಾನ ಉಂಟಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಅಭಿವೃದ್ದಿ ಉಂಟಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ತೊಡಗಿಸುವವರಿಗೆ ನಷ್ಟ ಉಂಟಾಗುತ್ತದೆ. 5ನೇ ಅಧಿಪತಿ ಕುಜ ಅಷ್ಟಮದಲ್ಲಿ ನೀಚನಾಗಿದ್ದು, ಷೇರು ವ್ಯವಹಾರಗಳಲ್ಲಿ ಹಣ ತೊಡಗಿಸಿರುವವರಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಷೇರು ವ್ಯವಹಾರಗಳು ಏರಿಳಿತದಿಂದ ಕೂಡಿರುತ್ತದೆ. ಕ್ರೀಡಾರಂಗದಲ್ಲಿ ನಿರಾಶೆ ಹೆಚ್ಚಾಗಿರುತ್ತದೆ. ಕ್ರಿಕೆಟ್ ಕೂಡ ಇದರಿಂದ ಹೊರತಾಗಿಲ್ಲ. ಬಂಗಾರ ಹಾಗೂ ಬೆಳ್ಳಿ ಬೆಲೆಗಳಲ್ಲೂ ಹೆಚ್ಚಿನ ಏರಿಳಿತ ಉಂಟಾಗುತ್ತದೆ.

ಈ ಸಂವತ್ಸರದ ಲಗ್ನದಿಂದ, ಕಾಂಗ್ರೆಸ್ ಪಕ್ಷದ ಲಗ್ನವು 4ನೇ ಮನೆಯಾಗಿದ್ದು, ಕಾಂಗ್ರೆಸ್ ಪಕ್ಷದ ಲಗ್ನದಿಂದ ದಶಮ ಸ್ಥಾನದಲ್ಲಿ ಸಂವತ್ಸರದ ಲಗ್ನ ಬರುವುದರಿಂದ ಹಾಲಿ ಗುರುದೆಶೆ ಗುರುಭುಕ್ತಿ ನಡೆಯುತ್ತಿರುವುದರಿಂದ ಯಾವುದೇ ಅಡಚಣೆಯಿಲ್ಲದೆ ಕೇಂದ್ರ ಸರ್ಕಾರ ಮುಂದುವರೆಯುತ್ತದೆ. ಹೆಚ್ಚಿನ ಬದಲಾವಣೆಗಳೆನೂ ಇರುವುದಿಲ್ಲ. ರಕ್ಷಣಾ ಖಾತೆ ಹೆಚ್ಚು ಜವಾಬ್ದಾರಿಯಿಂದ ಮುಂದುವರೆಯಬೇಕಾಗುತ್ತದೆ. ವಿದೇಶ ಸಂಬಂಧ ಹಾಗೂ ವ್ಯವಹಾರಗಳು ಉತ್ತಮಗೊಳ್ಳುತ್ತದೆ.

ಬಿ.ಜೆ.ಪಿ. ಪಕ್ಷದ ಲಗ್ನವು ಸಂವತ್ಸರ ಲಗ್ನಕ್ಕೆ ಸಪ್ತಮ ಸ್ಥಾನದಲ್ಲಿದ್ದು, ಶುಕ್ರದೆಶೆ ಬುಧಭುಕ್ತಿ ನಡೆಯುತ್ತಿದ್ದು, ಮೇ 2 ರಂದು ಗುರು ಮೀನ ರಾಶಿಗೆ ಬಂದಾಗ ಆಂತರಿಕ ಕಲಹ ಉಂಟಾಗುತ್ತದೆ. ಮಂತ್ರಿಗಳ ಬದಲಾವಣೆ ಉಂಟಾಗುತ್ತದೆ. ಹಾಗೂ-ಹೀಗೂ ಮುಂದುವರೆದರೆ, ಸೆಪ್ಟೆಂಬರ್ ನಂತರ ಪ್ರಮುಖರ ಬದಲಾವಣೆ ಉಂಟಾಗುತ್ತದೆ. ಸಾರ್ವಜನಿಕರಿಗೆ ಆಸಕ್ತಿ ಕಡಿಮೆಯಾಗುತ್ತದೆ.

ವಿಳಾಸ- ಆರ್. ಸೀತಾರಾಮಯ್ಯ
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ದೂರವಾಣಿ ಸಂಖ್ಯೆ (08182) 227344

Share this Story:

Follow Webdunia kannada