Select Your Language

Notifications

webdunia
webdunia
webdunia
webdunia

ಬಾಲಿವುಡ್ ಆವರಿಸಿಕೊಂಡ ಸಂಖ್ಯಾಶಾಸ್ತ್ರ!

ಬಾಲಿವುಡ್ ಆವರಿಸಿಕೊಂಡ ಸಂಖ್ಯಾಶಾಸ್ತ್ರ!
WD
ಅಲ್ಲೊಂದು ಎಕ್ಸ್‌ಟ್ರಾ 'k' ಇನ್ನೊಂದೆಡೆ ಹೆಚ್ಚುವರಿಯಾಗಿ 'z'... ಇದೇ ಅಲ್ಲವೇ ಇತ್ತೀಚೆಗೆ ಬಾಲಿವುಡ್ ಚಿತ್ರಗಳ ಟೈಟಲ್ಲುಗಳು ಮೂಡಿಬರುತ್ತಿರುವ ಪರಿ? 'Heyy Babyy' ಎಂಬ 'ಹೇ ಬೇಬಿ'ಯಿಂದ ಹಿಡಿದು, ಮುಂಬರುತ್ತಿರುವ 'Singh is Kinng' ಎಂಬ 'ಸಿಂಗ್ ಈಸ್ ಕಿಂಗ್'ವರೆಗೆ, ಒಂದಲ್ಲ ಒಂದು 'ಎಕ್ಸ್‌ಟ್ರಾ' ಅಕ್ಷರಗಳು ಚಿತ್ರಗಳ ಹೆಸರಲ್ಲಿ ನುಸುಳಿಕೊಳ್ಳುತ್ತಿವೆ. ಹೌದು. ಇದೇ ಸಂಖ್ಯಾಶಾಸ್ತ್ರ (ನ್ಯುಮರಾಲಜಿ) ಮಹಿಮೆ!

ಇದೆಲ್ಲ ಆರಂಭವಾಗಿದ್ದು ಬಹುಶಃ 'k' ಎಂಬಕ್ಷರದ ಮೇಲಿನ ಪ್ರೀತಿಯಿಂದಲೂ ಇರಬಹುದು. ನಿರ್ಮಾಪಕರು, ನಟರು ಎಲ್ಲರೂ ಇದರ ಮೇಲೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ. ತಮ್ಮ ತಮ್ಮ ಚಿತ್ರಗಳಿಗೆ ಹೆಸರಿರಿಸುವ ಮೊದಲು ಚಿತ್ರೋದ್ಯಮದ ನಿರ್ದೇಶಕರು, ನಿರ್ಮಾಪಕರು ಇದೀಗ ವೃತ್ತಿನಿರತ ಸಂಖ್ಯಾಶಾಸ್ತ್ರಜ್ಞರ ಮನೆಬಾಗಿಲಿಗೆ ಎಡತಾಕುತ್ತಿರುವುದು ಹೊಸದೇನಲ್ಲ.

ಚಿತ್ರೋದ್ಯಮದ ನೂರಾರು ಮಂದಿ ನಮ್ಮಲ್ಲಿ ಈ ಬಗ್ಗೆ ಸಲಹೆ ಕೇಳುತ್ತಿದ್ದಾರೆ. ಹಲವಾರು ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ನಮ್ಮ ಖಾಯಂ ಗ್ರಾಹಕರು ಎಂದು ಹೇಳುತ್ತಾರೆ ಪುಣೆ ಮೂಲದ ಸಂಖ್ಯಾಶಾಸ್ತ್ರಜ್ಞೆ ಶ್ವೇತಾ ಜುಮಾನಿ. ಅವರ ಹೆಸರು ಕೂಡಿನ ಸ್ಪೆಲ್ಲಿಂಗ್ ಕೂಡ 'Swetta' ಎಂದೇ! ನಮ್ಮ ಸಿದ್ಧಿಗೆ ಪ್ರಸಿದ್ಧಿಯೇನಿದ್ದರೂ ಅದಕ್ಕೆಲ್ಲಾ ಕಾರಣ ಈ ಬಾಲಿವುಡ್ ಮಂದಿ ಎಂದೂ ಸೇರಿಸುತ್ತಾರೆ ಆಕೆ.

ನಿರ್ಮಾಪಕ, ನಿರ್ದೇಶಕ ರಾಕೇಶ್ ರೋಶನ್ ಅವರ ಸಂಖ್ಯಾಶಾಸ್ತ್ರಪ್ರಿಯತೆಯು ಆರಂಭವಾಗಿದ್ದು ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ. 'ನಾ' ಮತ್ತು 'ಪ್ಯಾರ್' ಬರೆಯುವಲ್ಲಿ ಒಂದೊಂದು ಎಕ್ಸ್‌ಟ್ರಾ 'a' ಸೇರಿಸಿದ್ದರವರು. ಇದು ಜುಮಾನಿ ಕುಟುಂಬದ ಸಲಹೆಯ ಮಹಿಮೆ. ಈ ಚಿತ್ರವು ಸಾರ್ವಕಾಲಿಕ ಹಿಟ್ ಚಿತ್ರಗಳ ಸಾಲಿಗೆ ಸೇರಿಹೋಯಿತು. ಅಂದಿನಿಂದ, ರೋಶನ್ ಅವರು ಮುಂದಿನ ಯಾವುದೇ ಚಿತ್ರಗಳಿಗೆ ಸಂಖ್ಯಾಶಾಸ್ತ್ರವನ್ನು ತಪ್ಪದೇ ಪಾಲಿಸುವವರಾದರು. ಅವರ 'ಕೃಷ್' (Krrish) ಮತ್ತು ಕ್ರೇಜಿ -4 (Krazzy 4') ಚಿತ್ರಗಳ ಹೆಸರನ್ನೇ ನೋಡಿಬಿಡಿ!

ನಟನಾ ವೃತ್ತಿಗೂ ಕಾಲಿರಿಸಿದ ಗಾಯಕ ಹಿಮೇಶ್ ರೇಶಮ್ಮಿಯಾ ಕೂಡ ತಮ್ಮ ಸಂಖ್ಯಾಶಾಸ್ತ್ರದ ಮೇಲಿನ ಅಪಾರ ನಂಬಿಕೆಗೆ ಪ್ರಸಿದ್ಧರು. ಅವರ ಮುಂದಿನ ಚಿತ್ರ 'ಕರ್ಜ್' (Karzzzz) ಮತ್ತು 'ಎ ಲವ್ ಇಷ್ಟೋರಿ' (A Love Issshtory)ಯನ್ನು ಓದಲು ಪ್ರಯತ್ನಿಸಿ ನೋಡಿ! ಅವರ ಮತ್ತೊಂದು ಚಿತ್ರಕ್ಕೆ 'ಕಜ್ರಾ ರೇ' ಎಂಬ ಹೆಸರನ್ನೂ ಸಂಖ್ಯಾಶಾಸ್ತ್ರದ ಅನುಸಾರವಾಗಿಯೇ ಇರಿಸಲಾಗಿದೆ.

ಅವರು ಸಂಖ್ಯಾಶಾಸ್ತ್ರದಲ್ಲಿ ಎಷ್ಟೊಂದು ಪಳಗಿದ್ದಾರೆಂದರೆ, ತಾವೇ ಸ್ವತಃ ಎಲ್ಲ ಸ್ಪೆಲ್ಲಿಂಗ್‌ಗಳನ್ನು ನಿರ್ಧರಿಸುತ್ತಾರೆ ಎನ್ನುತ್ತಾರೆ ಮುಂಬಯಿಯ ಸಂಖ್ಯಾಶಾಸ್ತ್ರಜ್ಞರೊಬ್ಬರು.

ವಿಪುಲ್ ಷಾ, ಜಾನ್ ಮ್ಯಾಥ್ಯೂ ಮತ್ತನ್ ಮತ್ತು ಸಂಗೀತ್ ಶಿವನ್ ಅವರು ಕೂಡ ಸಂಖ್ಯಾಶಾಸ್ತ್ರಜ್ಞರನ್ನು ಸಂದರ್ಶಿಸುತ್ತಿರುತ್ತಾರೆ. ವಿಪುಲ್ ಶಾ ಅವರ 'ನಮಸ್ತೇ (Namastey) ಲಂಡನ್'ಗೆ ಮತ್ತು ಸಾಜಿದ್ ನಾಡಿಯದ್‌ವಾಲಾರ 'ಹೇ ಬೇಬಿ'ಗೆ ನಾನೊಂದು ಹೆಚ್ಚುವರಿ 'y'ಗಳನ್ನು ಸೇರಿಸಿದೆ. ಎರಡು ಕೂಡ ಬಾಕ್ಸಾಫೀಸ್‌ನಲ್ಲಿ ಹಿಟ್ ಆದವು ಎನ್ನುತ್ತಾರೆ ಮುಂಬಯಿಯ ಸಂಖ್ಯಾಶಾಸ್ತ್ರಜ್ಞ ನೀರಜ್ ಮಚ್ಚಂದಾ.

ಹೇಗಿದೆ ಸಂಖ್ಯಾಶಾಸ್ತ್ರದ ಮಹಿಮೆ!

Share this Story:

Follow Webdunia kannada