Select Your Language

Notifications

webdunia
webdunia
webdunia
webdunia

ಧೋನಿಯ ಸೋಲಿಗೆ ಕಾರಣ ಶನಿಯ ವಕ್ರದೃಷ್ಟಿ!

ಧೋನಿಯ ಸೋಲಿಗೆ ಕಾರಣ ಶನಿಯ ವಕ್ರದೃಷ್ಟಿ!
PTI
ಮಿಲಿಯಗಟ್ಟಲೆ ಭಾರತೀಯರ ಹೀರೋ ಆಗಿ ಮೆರೆದಿದ್ದ ರಾಂಚಿಯ ಕ್ರಿಕೆಟ್ ವೀರ, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ರಾತ್ರಿ ಬೆಳಗಾಗುವುದರೊಳಗೆ ಭಾರತೀಯರ ಪಾಲಿಗೆ ವಿಲನ್ ಆದರು. ಎಲ್ಲರಿಂದ ಶಹಬ್ಬಾಸ್‌ಗಿರಿ ಪಡೆದಿದ್ದ ಧೋನಿ ಈಗ ತೆಗಳಿಕೆ, ಮೂದಲಿಕೆ, ಟೀಕೆ- ಟಿಪ್ಪಣಿಗಳ ಮಹಾಪೂರವನ್ನೇ ಕೇಳಬೇಕಾಗಿದೆ. ಕಾರಣ ಒಂದೇ ಒಂದು. ವಿಶ್ವಕಪ್ ಟಿ20ಯಲ್ಲಿ ಭಾರತಕ್ಕೆ ಹೀನಾಯ ಸೋಲು.

ಸೋಲಿಗೆ ಸ್ವತಃ ಧೋನಿ ಸೇರಿದಂತೆ ಕ್ರಿಕೆಟ್ ತಜ್ಞರು ವಿವಿಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೂ, ವಿಶ್ವದ ಹಲವು ಖ್ಯಾತ ಜ್ಯೋತಿಷಿಗಳು ಇದೀಗ ಧೋನಿಯ ಈ ಸೋಲಿಗೆ ಕಾರಣ ಧೋನಿಗೆ ಇದೇ ಜೂನ್ ತಿಂಗಳಲ್ಲಿ ವಕ್ಕರಿಸಿಕೊಂಡಿರುವ ಶನಿಯೇ ಕಾರಣ ಎಂದಿದ್ದಾರೆ.

ಹೌದು. ಅಪಾರ ಭರವಸೆ ಮೂಡಿಸಿದ್ದ ಧೋನಿ ಸ್ಥಿತಿ ಹೀಗೆ ಏಕಾಏಕಿ ಕೈಕೊಡಲು ಕಾರಣವಾದರೂ ಏನು ಎಂದು ಜಾತಕ ಜಾಲಾಡಿದಾಗ ಧೋನಿಗೆ ಈಗ ಶನಿಯ ವಕ್ರದೃಷ್ಟಿ ಬಿದ್ದಿರುವುದೂ ಅವರ ಕುಂಡಲಿಯಲ್ಲಿ ಕಂಡುಬಂದಿದೆ.

17ನೇ ಏಷ್ಯಾ ಜ್ಯೋತಿಷಿಗಳ ಸಮ್ಮೇಳನದ ಪ್ರಮುಖ ಸಲಹೆಗಾರ ಪ್ರೊ.ಏಸಕೇ ಶಾಸ್ತ್ರಿ ಹಾಗೂ ಇತರ ಹಲವು ಪ್ರಮುಖ ಜ್ಯೋತಿಷಿಗಳ ಪ್ರಕಾರ, 1981ರ ಜುಲೈ ಏಳರಂದು ಜನಿಸಿದ ಧೋನಿಗೆ ಈಗ ಸರಿಯಾಗಿ ಜೂನ್ ಆರಂಭದಲ್ಲಿ ಶನಿಯ ವಕ್ರದೃಷ್ಟಿ ಬಿದ್ದಿದೆ. ಈ ವಕ್ರದೃಷ್ಟಿಯಿಂದ ಕೇವಲ ಈಗಷ್ಟೇ ಅಲ್ಲ, ಧೋನಿ ಇನ್ನೂ ಕೆಲಕಾಲ ಹಲವು ಕಷ್ಟನಷ್ಟ, ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾದೀತು. ಧೋನಿ ಕೆರಿಯರ್‌ನ ಅತ್ಯಂತ ಕೆಟ್ಟ ಗಳಿಗೆ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಅವರ ಜನ್ಮ ಕುಂಡಲಿಯ ಲಗ್ನ ಕರ್ಕವಾದರೆ, ರಾಶಿ ಸಿಂಹ. ಇವೆರಡರ ಅಧಿಪತಿಗಳು ಕ್ರಮವಾಗಿ ಚಂದ್ರ ಹಾಗೂ ಸೂರ್ಯ. 2004ರಲ್ಲಿ ಧೋನಿಯವರಿಗೆ ರಾಹುವಿನ ಮಹಾದೆಶೆಯಿತ್ತು. ರಾಹುವಿನ ಮಹಾದೆಶೆ ಹಾಗೂ ಗುರು ಲಾಭದಾಯಕ ಸ್ಥಾನದಲ್ಲಿದ್ದುದರಿಂದ ಧೋನಿ ಅವರು ಆ ಸಮಯದಲ್ಲಿ ಭಾರೀ ಉನ್ನತಿ ಪಡೆದರು. ಸಾಕಷ್ಟು ಹಣವ್ನನೂ ಗಳಿಸಿದರು. ಆದರೆ ಜೂನ್ 2009ರಿಂದ ಇವರ ಮೇಲೆ ಇನ್ನು ಮೂರು ವರ್ಷಗಳ ಕಾಲ ಶನಿ ದೆಶೆಯಿದೆ. ಹಾಗಾಗಿ ಧೋನಿಗೆ ಇನ್ನು ಮೂರು ವರ್ಷಗಳ ಕಾಲ ಸ್ವಲ್ಪ ಕಠಿಣ ಪರಿಸ್ಥಿತಿ ಇರಬಹುದು ಎಂದೂ ಲೆಕ್ಕಾಚಾರ ಹಾಕಿದ್ದಾರೆ.

ಸೆಂಟರ್ ಫಾರ್ ಆಸ್ಟ್ರಾಲಜಿಕಲ್ ಸ್ಟಡಿ ಅಂಡ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ ಪ್ರೊ.ಶಾಸ್ತ್ರಿ ಅವರು ಹೇಳುವಂತೆ, ಶನಿ ಧೋನಿಯ ಕುಂಡಲಿಯಲ್ಲಿ ಪ್ರಮುಖರಾಗಿರುವ ಸೂರ್ಯ ಹಾಗೂ ಚಂದ್ರರ ಬಲವಾದ ಶತ್ರು. ಕರ್ಕ ಲಗ್ನವಿರುವ ವ್ಯಕ್ತಿಗೆ ಶನಿ ಅತ್ಯಂತ ಮಾರಕನು. ಹಾಗಾಗಿ ಅಂತಹ ಲಗ್ನವಿರುವೆಡೆಗೆ ಶನಿ ಬಂದರೆ ಶನಿಯ ಉಪಟಳ ಹೆಚ್ಚಿರುತ್ತದೆ. ಈಗ ಧೋನಿಯ ಸ್ಥಿತಿ ಅದೇ ಇದೆ ಎಂದಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಜ್ಯೋತಿಷಿಗಳ ಸಮ್ಮೇಳನದಲ್ಲಿ ಹಲವು ಜ್ಯೋತಿಷಿಗಳೂ ಧೋನಿಯದ್ದು ಕರ್ಕ ಲಗ್ನವಾಗಿರುವುದರಿಂದ, ಅವರ ಮೇಲೆ ಶನಿಯ ಕೆಟ್ಟ ಪರಿಣಾಮ ಹೆಚ್ಚು. ಧೋನಿಗೆ ಯಾವಾಗ ಶನಿ ವಕ್ಕರಿಸಿದರೂ ಆತ ಶುಭಕಾರಕನಾಗಿರುವುದಿಲ್ಲ. ಅಥವಾ ಕೆಟ್ಟ ಪರಿಣಾಮ ಬೀರದೇ ಇರುವುದಿಲ್ಲ. ಶನಿಯ ಕಾಟಕ್ಕೆ ಧೋನಿ ತೊಂದರೆಪಡಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಹಲವು ಯಶಸ್ಸು ಬೆನ್ನಿಗಿದ್ದರೂ, ಟ್ವೆಂಟಿ20ಯಲ್ಲಿ ಪಳಗಿದವರು ಎಂಬ ಪಟ್ಟವಿದ್ದರೂ, ಹೀಗೆ ಧಡಕ್ಕನೆ ಬಂದ ಸೋಲಿಗೆ ತಾಂತ್ರಿಕ ಕಾರಣಗಳ ಜತೆಗೆ, ಧೋನಿಯ ಕುಂಡಲಿಯೂ ಕಾರಣವಿರಬಹೇನೋ... ಏನಂತೀರಾ?

Share this Story:

Follow Webdunia kannada