Select Your Language

Notifications

webdunia
webdunia
webdunia
webdunia

ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ

ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ
ಅವಿನಾಶ್ ಬಿ.
WD
ಕನ್ನಡ ಕರಾವಳಿಯಷ್ಟೇ ಏಕೆ, ಕೇರಳದ ಉತ್ತರ ಭಾಗದ ಕರಾವಳಿಯಲ್ಲಿಯೂ ಚೆಂಡೆಯ ಸದ್ದು ಕೇಳದವರಿಲ್ಲ, ಮದ್ದಳೆಯ ಧೋಂ-ಕಾರಕ್ಕೆ ತಲೆದೂಗದವರಿಲ್ಲ, ರಂಗಸ್ಥಳದ ಗೆಜ್ಜೆಯ ಸದ್ದಿಗೆ ಮನಸೋಲದವರಿಲ್ಲ. ಪರಶುರಾಮ ಸೃಷ್ಟಿಯೆಂದೇ ಕರೆಯಲಾಗುವ ಮಣ್ಣಿನ ಕಣ ಕಣದಲ್ಲಿಯೂ ಯಕ್ಷಗಾನದ ಸುವಾಸನೆಯಿದೆ, ಜನರ ನಾಡಿ ಮಿಡಿತವೂ ಯಕ್ಷಗಾನದೊಂದಿಗೆ ಮಿಳಿತವಾಗಿದೆ.

ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದವರು ಶ್ರೀಮತಿ ಲೀಲಾ ಬೈಪಾಡಿತ್ತಾಯರು. ತುಳುನಾಡು ಎಂದೇ ಕರೆಯಲಾಗುವ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳು, ಯಕ್ಷಗಾನದ ಬಡಗು ತಿಟ್ಟಿನ ವೈವಿಧ್ಯದ ಸೊಗಡುಳ್ಳ ಉತ್ತರ ಕನ್ನಡ ಜಿಲ್ಲೆ ಹಾಗೂ ಯಕ್ಷಗಾನ ತೆಂಕು ತಿಟ್ಟಿನ ತವರೂರು ಎಂದೇ ಬಣ್ಣಿಸಲಾಗುವ ಕಾಸರಗೋಡು ಜಿಲ್ಲೆಗಳಾದ್ಯಂತ ಸರಿ ಸುಮಾರು ನಾಲ್ಕು ದಶಕಗಳ ಕಾಲ ಮನೆಮಾತಾದವರು. ಈಗ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿದೆ. ಕರ್ನಾಟಕದ ಯಕ್ಷಗಾನ ಅಕಾಡೆಮಿಯ 2010ನೇ ಸಾಲಿನ ಪ್ರಶಸ್ತಿಯು ಅವರನ್ನು ಅರಸಿಕೊಂಡು ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಂದಾರ್ತಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೇ 1, 2011ರಂದು ನಡೆಯಲಿದೆ.

ಗಂಡು ಮೆಟ್ಟಿನ ಕಲೆಯಲ್ಲಿ ಮೆರೆದಾಕೆ...
ಕರಾವಳಿಯ ರಮ್ಯಾದ್ಭುತ ಕಲಾ ಪ್ರಕಾರವಾಗಿರುವ ಯಕ್ಷಗಾನದಲ್ಲೆ ಕಸುಬು ಮಾಡಬೇಕಿದ್ದರೆ ಧಮ್ ಬೇಕು ಎಂಬ ಮಾತಿದೆ. ಯಾಕೆಂದರೆ ಹೇಳಿ ಕೇಳಿ ಇದು ಗಂಡು ಮೆಟ್ಟಿನ ಕಲೆ. ಅಂಥದ್ದೊಂದು ವಾತಾವರಣದಲ್ಲಿ ಮೊತ್ತ ಮೊದಲ ಬಾರಿಗೆ ಕಂಚಿನ ಕಂಠ ಮೊಳಗಿಸಿದವರು ಲೀಲಾ ಬೈಪಾಡಿತ್ತಾಯರು.

ಕಾಸರಗೋಡಿನ ಮಧೂರು ಅವರ ಹುಟ್ಟೂರು. ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಇಂದಿಗೂ ಕೂಡ ಚೆಂಡೆ ಮದ್ದಳೆಗಳ ನಿನಾದ ಕೇಳಿ ಬರುತ್ತಿರುತ್ತದೆ. ಅಂಥದ್ದೊಂದು ಪರಿಸರದಲ್ಲೇ ಹುಟ್ಟಿ ಬೆಳೆದ ಲೀಲಾ ಅವರಿಗೆ, ಅದೇನು ಮನಸ್ಸು ಬಂತೋ... ಮಧೂರಿನ ಸರಳಾಯರ ಮನೆತನದಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದ್ದರು. ಬಡತನದ ಬೇಗೆಯ ನಡುವೆಯೇ ಸಂಗೀತಾಭ್ಯಾಸ ಮಾಡಿದ್ದು, ಇವರ ಜೀವನಕ್ಕೆ ಮುಂದೊಂದು ದಿನ ದಾರಿ ದೀಪವಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದಲೋ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು ಎಂಬುದು ಇಲ್ಲಿ ಉಲ್ಲೇಖಿಸಲೇಬೇಕಾದ ಅಂಶ. ಅದರ ನಡುವೆಯೇ, ಮದ್ರಾಸ್ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ (ಸ್ನಾತಕ ಪದವಿಗೆ ಸಮ) ಪದವಿಯನ್ನೂ ಪಡೆದಿದ್ದರು ಎಂಬುದು ಅವರೊಳಗಿನ ಕಲಿಕೆಯ ತುಡಿತಕ್ಕೆ ಸಾಕ್ಷಿ. ಇದೆಲ್ಲವೂ ಶಾಲೆಗೆ ಹೋಗದೆ ಸಾಧಿಸಿದ್ದು.

ಬಹುಶಃ ಶಾರದೆ ಇದ್ದಲ್ಲಿ ಲಕ್ಷ್ಮಿ ಇರಲು ಹಿಂದೇಟು ಹಾಕುತ್ತಾಳೆ ಎಂಬುದು ಇದಕ್ಕೇ ಇರಬೇಕೇನೋ... ಕಿತ್ತು ತಿನ್ನುವ ಬಡತನ. ತಂದೆಯವರ ನಿಧನಾನಂತರ ಅವರು ಬೆಳೆದಿದ್ದು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿನ ತಮ್ಮ ಸೋದರ ಮಾವನ ಮನೆಯಲ್ಲಿ. ಮಾವ ರಾಮಕೃಷ್ಣ ಭಟ್ ಅವರು ಮಧೂರು ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದೇವ ನೃತ್ತ (ಉತ್ಸವ ಸಂದರ್ಭ ಉತ್ಸವ ಮೂರ್ತಿಯನ್ನು ಹೊತ್ತು ನರ್ತಿಸುವ ವಿಶಿಷ್ಟ ನೃತ್ಯ ಪ್ರಕಾರ)ದಲ್ಲಿ ಸುಪ್ರಸಿದ್ಧರು. ಇದೇ ಕಲೆಯಲ್ಲಿ ಅವರಿಗೆ ಕೂಡ ಕೇರಳ ರಾಜ್ಯ ಪ್ರಶಸ್ತಿಯೂ ಬಂದಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.

ಸಂಗೀತದಿಂದ ಯಕ್ಷಗಾನಕ್ಕೆ...
webdunia
WD
ಹೀಗೆ, ಕಲಾ ಪರಿಸರದಲ್ಲೇ ಬೆಳೆದಿದ್ದರಾದರೂ, ಯಕ್ಷಗಾನದಿಂದ ದೂರವೇ ಇದ್ದಿದ್ದ ಲೀಲಾ ಅವರಿಗೆ, ಅದು ಹೇಗೆ ಯಕ್ಷಗಾನದ ನಂಟು ಹತ್ತಿಕೊಂಡಿತೆಂದರೆ, ಮದುವೆಯಾಗುವ ಮೂಲಕ! ಈಗ ತೆಂಕುತಿಟ್ಟಿನ ಅಗ್ರಮಾನ್ಯ ಗುರುಗಳು ಎಂದೇ ಪರಿಗಣಿಸಲ್ಪಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯರು, ಜೀವನ ರಥ ಸಾಗಿಸಲು ತಮ್ಮ ಪಥದಲ್ಲೇ ಕರೆದೊಯ್ದರು. ಅವರು ಮದುವೆಯಾಗಿ ಬಂದದ್ದು ಪತಿಯ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಕಡಬ ಎಂಬಲ್ಲಿಗೆ. ಅಲ್ಲಿನ ಹಳ್ಳಿ ಹಳ್ಳಿಗಳಲ್ಲೂ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದೆ ಎಂದಾದರೆ, ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿದ್ದ ಕಾಲವದು. ಹೀಗಾಗಿ ಯಕ್ಷಗಾನದ ಕಾರ್ಯಕ್ರಮಗಳಿಗೇನೂ ಕೊರತೆಯಿರಲಿಲ್ಲ. ಅಲ್ಲಿನ ಪ್ರತಿ ಮನೆಯು ಕೂಡ ಯಕ್ಷಗಾನದ ಹಿಮ್ಮೇಳದ ಸದ್ದು ಮತ್ತು ಮುಮ್ಮೇಳದ ವಿದ್ವತ್‌ನಿಂದಲೇ ಬೆಳಗಿತ್ತು. ಮನೆ-ಮನಗಳು ಯಕ್ಷಗಾನದಿಂದಲೇ ಸಮೃದ್ಧವಾಗಿದ್ದವು. ಈಗಲೂ ಸುತ್ತಮುತ್ತ ತಾಳಮದ್ದಳೆಯ ಸದ್ದು ಆಗಾಗ್ಗೆ ಕೇಳಿಸುತ್ತಿರುತ್ತದೆ.

ಯಕ್ಷಗಾನಕ್ಕೆ ಬಂದಿದ್ದು ಹೇಗೆ? ಮುಂದಿನ ಪುಟ ಕ್ಲಿಕ್ ಮಾಡಿ...


webdunia
WD
ಸಂಗೀತದ ರಾಗಗಳ ಪರಿಚಯವೆಲ್ಲವೂ ಚೆನ್ನಾಗಿ ಗೊತ್ತಿದ್ದ ಪತ್ನಿ ಲೀಲಾಗೆ ಯಕ್ಷಗಾನದ ಹಾಡುಗಾರಿಕೆ ಕಲಿಸಿದರೆ ಹೇಗೆ ಎಂಬ ಯೋಚನೆಗೆ ಬಿದ್ದವರೇ, ಹರಿನಾರಾಯಣ ಅವರು ಪತ್ನಿಯ ಕೈಗೆ ಜಾಗಟೆ-ಕೋಲು ಕೊಟ್ಟೇ ಬಿಟ್ಟರು. ಇದು ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಬಳಿಕ ನಡೆದದ್ದೆಲ್ಲವೂ ಈಗ ಇತಿಹಾಸ. ಯಕ್ಷಗಾನ ನೋಡಿದರೆ ಏಳು ರಂಗ ಪೂಜೆ ನೋಡಬೇಕು ಅನ್ನುವ ಸಂಪ್ರದಾಯದ ಕಾಲವಾಗಿತ್ತದು. ಮೂಢ ನಂಬಿಕೆಗಳ ಕಟ್ಟಳೆಯನ್ನೆಲ್ಲಾ ಮೆಟ್ಟಿ ನಿಂತು, ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಲೀಲಾ ಬೈಪಾಡಿತ್ತಾಯ ಅವರು, ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ ಅಲಂಕರಿಸಿ ಬಿಟ್ಟರು. ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾಗಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಡೇರೆ ಮೇಳಗಳಲ್ಲಿಯೂ, ಬಯಲಾಟದ ಮೇಳಗಳಲ್ಲಿಯೂ ಪತಿಯೊಂದಿಗೆ ವೃತ್ತಿಪರರಾಗಿ ಊರಿಂದೂರಿಗೆ ತಿರುಗಾಟ ಮಾಡಿದ ಲೀಲಾ, ಅದೆಷ್ಟೋ ಮಹಾನ್ ಕಲಾವಿದರನ್ನು ಕುಣಿಸಿದ್ದಾರೆ, ಭೇಷ್ ಅನ್ನಿಸಿಕೊಂಡಿದ್ದಾರೆ. ಅವರಿಗೆ ಯಕ್ಷಗಾನ ಬದುಕಿನಲ್ಲಿ ಸಿದ್ಧಿ, ಪ್ರಸಿದ್ಧಿ ದೊರೆತದ್ದು ಎಂಭತ್ತರ ದಶಕದಲ್ಲಿ. ಅರ್ವ ನಾರಾಯಣ ಶೆಟ್ಟರು ಕಟ್ಟಿದ ಅಳದಂಗಡಿ ಮೇಳದಲ್ಲಿ (ಟೆಂಟು ಮೇಳ) ಪ್ರಧಾನ ಭಾಗವತರಾಗಿ ಮೆರೆದರು. ಅಂದಿನ ಅತ್ಯಂತ ಸಮೃದ್ಧ ಸಾಹಿತ್ಯ ಹೊಂದಿದ್ದ ಸಾಮಾಜಿಕ ಕಥಾನಕ 'ಪರಕೆದ ಪಿಂಗಾರ' ಹಾಡುಗಳ ನೆನಪಂತೂ ಈಗಲೂ ಕಿವಿಯಲ್ಲಿ ಗುನುಗುತ್ತಿರುತ್ತದೆ.

ಅಗ್ರಮಾನ್ಯರ ಒಡನಾಟ...
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಪ ಭಾಗವತರು, ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ಭೀಮ ಭಟ್, ಅಡೂರು ಮದ್ಲೆಗಾರರು, ಗೋಪಾಲಕೃಷ್ಣ ಕುರುಪರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಒಡನಾಟ ಕೂಡ ಅವರೊಳಗಿನ ಯಕ್ಷಗಾನ ಕಲೆಯನ್ನು ತಿದ್ದಿ ತೀಡಿತು.

ಏನವರ ಸಾಧನೆ...
ಅಗ್ರಮಾನ್ಯ ಭಾಗವತರಾಗಿ ಬೆಳೆದ ಲೀಲಾ ಅವರನ್ನು ಇಷ್ಟೊಂದು ಹೊಗಳುವುದೇಕೆ? ಅಂತ ಕೆಲವರಿಗೆ ಅನ್ನಿಸಬಹುದು. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಅನಂತವಾದೀತು. ಅವುಗಳಲ್ಲಿ ಕೆಲವೊಂದನ್ನು ನೆನಪಿಸಿಕೊಂಡು ಹೇಳಬಹುದಾದರೆ, ಗಂಡಸರೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಕಾಲಿಟ್ಟ ಮೊದಲ ಮಹಿಳೆ, ಗಂಡಸರಿಗೇ ಮೀಸಲಾಗಿದ್ದ ಭಾಗವತಿಕೆಯಲ್ಲಿ ಯಕ್ಷಗಾನಕ್ಕೆ ಹೆಣ್ಣು ಕಂಠವೂ ಹೊಂದುತ್ತದೆ ಎಂದು ಸಾಧಿಸಿ ತೋರಿಸಿದವರು, ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡುವ, ಹಗಲಲ್ಲಿ ನಿದ್ರಿಸುವ, ರಾತ್ರಿಯಾದಂತೆ ಎದ್ದು ಕುಳಿತು ಕಲಾ ಪ್ರದರ್ಶನಕ್ಕೆ ಸಿದ್ಧವಾಗುವ ಛಾತಿ ತೋರಿಸಿದ್ದು. ಈ ಸಾಧನೆಗಳ ಪಟ್ಟಿಯಲ್ಲೆಲ್ಲ ಅಗ್ರಸ್ಥಾನಿಯಾಗಿ ಕಾಣುವುದು, ಸಹ-ಭಾಗವತರೇನಾದರೂ ಕೈಕೊಟ್ಟರೆ, ಇಡೀ ರಾತ್ರಿ ನಿದ್ದೆ ಬಿಟ್ಟು ಇಡೀ ಆಟವನ್ನು ಆಡಿಸಿದ ಕೀರ್ತಿಯೂ ಇದೆ. ಎರಡನೆಯದು, ಸಂಗೀತಾಭ್ಯಾಸ ಮಾಡಿದ್ದರೂ, ಯಕ್ಷಗಾನದ ಸೊಗಡಿಗೆ ಧಕ್ಕೆಯಾಗದಂತೆ, ಎಲ್ಲಿಯೂ ಯಕ್ಷಗಾನದ ಹಳಿ ತಪ್ಪದೆ ವೀರರಸಕ್ಕೂ ಸೈ ಅನ್ನಿಸಿ, ಯಕ್ಷಗಾನದ ಸಂಪ್ರದಾಯ ಕೆಡದಂತೆ ನೋಡಿಕೊಂಡದ್ದು. ಅವರ ಭಾಗವತಿಕೆ ಕೇಳಿದವರಿಗೆ ಅರ್ಥಗಾರಿಕೆ ಸುಲಲಿತ. ಯಾಕೆಂದರೆ ಲೋಪವಿಲ್ಲದಂತಹಾ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ. ಕೇವಲ 7ನೇ ತರಗತಿ ಓದಿದ್ದರೂ, ಆಕೆಗೆ ಈ ಸಾಹಿತ್ಯ ಸರಸ್ವತಿಯು ಒಲಿದದ್ದು ವಿಶೇಷ.

ರಂಗಕ್ಕೇರುವ ಮುನ್ನ ಪೂರ್ವ ಸಿದ್ಧತೆ...
ಈಗ ಲೀಲಾ ಅವರಿಗೆ 64ರ ಹರೆಯ. (ಜನ್ಮದಿನಾಂಕ 23 ಮೇ 1947). ತೆಂಕು ತಿಟ್ಟು ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಧ್ರುವ ನಕ್ಷತ್ರದಂತೆ ಮಿನುಗುತ್ತಿದ್ದ ಅವರ ಪ್ರಭಾವಳಿಯು ಸರಕಾರದ ಹೆಬ್ಬಾಗಿಲಿನವರೆಗೆ ಈಗ ತಲುಪಿದೆ. ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದ ಗುರುಗಳಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಅವರ ಜ್ಞಾನ ಅಪಾರ. ಹಿರಿಯರಲ್ಲಿ ಕೇಳಿ ತಿಳಿದುಕೊಂಡು ತಮ್ಮ ಜ್ಞಾನವನ್ನು ವರ್ಧಿಸಿಕೊಂಡರಲ್ಲದೆ, ಕಿರಿಯರಿಗೆ ಮಾರ್ಗದರ್ಶಕರಾದರು. ಯಾವುದೇ ಪ್ರಸಂಗ ಆಡಿಸುವ ಮೊದಲು, ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಚೌಕಿಯಲ್ಲಿ ಮೊದಲೇ ಚರ್ಚಿಸಿ, ಪ್ರದರ್ಶನವೊಂದು ಎಲ್ಲೂ ಲೋಪವಾಗಬಾರದು, ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ, 'ಮೇಲೆ ಬೀಳಬೇಕು' ಎಂಬ ತುಡಿತದಿಂದ, ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದ ರೀತಿ ಇಂದಿನ ಕಲಾವಿದರಿಗೆ ಸ್ಫೂರ್ತಿಯಾಗಲೇಬೇಕು. ಇದನ್ನು ಇಲ್ಲಿ ಹೇಳಿದ್ದೇಕೆಂದರೆ, ವಿದ್ಯೆಗೆ ವಿನಯವೇ ಭೂಷಣ. ಕಲಿತವರು ವಿನಯಶೀಲರಾಗಿರುತ್ತಾರೆ ಎಂಬುದಕ್ಕೆ ಲೀಲಾ ಉದಾಹರಣೆ. ಸಮರ್ಪಕವಾಗಿ ಕಲಿಯದವರು ತಾವೇ ದೊಡ್ಡವರು, ತಮಗಿಂತ ಮಿಗಿಲಿಲ್ಲ ಎಂಬಂತಹಾ ವರ್ತನೆ ತೋರುತ್ತಾರೆ.

ಕಾಳಿಂಗ ನಾವಡರ ಒಡನಾಟ... ಮುಂದಿನ ಪುಟ ಕ್ಲಿಕ್ ಮಾಡಿ..


ಕಾಳಿಂಗ ನಾವಡರ ಜತೆಗೆ...
ಇನ್ನೂ ಒಂದು ಉಲ್ಲೇಖಿಸಲೇಬೇಕಾದ ವಿಷಯವೊಂದಿದೆ. ಬಡಗು ತಿಟ್ಟಿನ ಮಹಾನ್ ಕಲಾವಿದರಾಗಿ, ಇಂದಿನ ಯುವ ಭಾಗವತರಿಗೆಲ್ಲರಿಗೂ ಅನುಕರಣಯೋಗ್ಯವಾಗಿ ಅಕಾಲ ಮರಣವನ್ನಪ್ಪಿದ್ದ ದಿವಂಗತ ಕಾಳಿಂಗ ನಾವಡರ ಜತೆಗೂ ಅವರು ಕಾರ್ಯಕ್ರಮ ನೀಡಿದ್ದಾರೆ! ಹೌದು. ನನಗಾಗ ಬಹುಶಃ ಏಳೆಂಟು ವರ್ಷ ಇದ್ದಿರಬೇಕು. ಶೃಂಗೇರಿಯಲ್ಲಿ ನಡೆದ ಆ ಕಾರ್ಯಕ್ರಮದ ನೆನಪು ಬಾರದಿದ್ದರೂ, ನಾವಡರು ಅಂದು ಲೀಲಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟುತ್ತಿದೆ. ಆ ಹಾಲ್‌ನಲ್ಲಿ ಕಾಳಿಂಗ ನಾವಡರ ಹಾಡಿಗೆ ಎಷ್ಟು ಶಿಳ್ಳೆ, ಚಪ್ಪಾಳೆ ಬಿದ್ದಿತ್ತೋ, ಅಷ್ಟೇ ಬಲವಾದ ಮೆಚ್ಚುಗೆ ಲೀಲಾ ಹಾಡಿಗೂ ಬಂದಿತ್ತು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೆ! ನಂತರವೂ ಮುಂಬೈಯಲ್ಲಿ ಕಾಳಿಂಗ ನಾವಡರು ಮತ್ತು ಲೀಲಾ ಒಂದೇ ವೇದಿಕೆಯಲ್ಲಿ ಹಾಡಿದ್ದರು.

ಇನ್ನು, ಈಗಿನ ಯಕ್ಷಗಾನ ಪ್ರಸಂಗಗಳು, ಯಕ್ಷಗಾನೀಯವಲ್ಲದ ನಾಟಕೀಯ ಮತ್ತು ಸಿನಿಮೀಯ ಶೈಲಿಗಳು ಲೀಲಾ ಅವರಿಗೆ ನೋವು ತಂದಿವೆ. ಅವರು ಇದನ್ನು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ ಇದೆ. ಹಾಗೆಯೇ ನಾಟಕಕ್ಕೂ ಇದೆ, ಸಿನಿಮಾಕ್ಕೂ ಇದೆ. ಅವುಗಳು ಆಯಾ ಕ್ಷೇತ್ರಗಳಲ್ಲೇ ವರ್ಧನೆಯಾಗಲಿ, ಅದು ಬಿಟ್ಟು ಯಕ್ಷಗಾನ ಹೋಗಿ ನಾಟಕವಾದರೆ, ಅಥವಾ ಭಾಗವತರು ಸಿನಿಮಾದಂತೆ ಹಾಡುಗಳನ್ನು ಹಾಡಿದರೆ, ಯಕ್ಷಗಾನದ ಆ ಕರ್ಣಾನಂದಕರವಾದ ಇಂಪು, ಸೊಗಡು ಇನ್ನೆಲ್ಲಿ? ಟಿವಿ, ಸಿನಿಮಾಗಳು ಹಾಗೂ ಆಧುನಿಕತೆಯ ಋಣಾತ್ಮಕ ಪ್ರಭಾವದಿಂದಾಗಿ ಯಕ್ಷಗಾನ ಪ್ರದರ್ಶನದ ಇಂದಿನ ಅವಧಿಯು ಕೂಡ ಕಿರಿದಾಗಿದೆ. ಆದರೆ, ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ಸವಿಯನ್ನು ಬಲ್ಲವರೇ ಬಲ್ಲರು, ಅಲ್ಲವೇ?

ಸನ್ಮಾನಗಳ ಮಹಾಪೂರ...
ಲೀಲಾ ಅವರನ್ನು ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರಿಯುತ್ತಾರೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ. ವಿಶೇಷವಾಗಿ ಮುಂಬೈಯಲ್ಲಿ ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗಳು, ತಾಲೂಕು ಪ್ರಶಸ್ತಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅವರ ಕಲಾನೈಪುಣ್ಯವನ್ನು. ಅವರ ಮನೆಗೊಮ್ಮೆ ಹೋಗಿ ನೋಡಿದರೆ, ಗೋಡೆಗಳನ್ನೆಲ್ಲಾ ಸನ್ಮಾನ ಪತ್ರಗಳು, ಸ್ಮರಣಿಕೆಗಳು ಮುಚ್ಚಿವೆ! ಮುಂಬಯಿಯಲ್ಲಿ, ದೆಹಲಿಯಲ್ಲಿ, ಬರೋಡದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ ಲೀಲಾ ಅವರಿಗೆ. ಮಂಗಳೂರು ಆಕಾಶವಾಣಿಯಲ್ಲಿ ಅವರ ಧ್ವನಿ ಎಂಬತ್ತರ ದಶಕದಲ್ಲೇ ಕೇಳಿಬರುತ್ತಿತ್ತು.

ಇನ್ನೊಂದು ನೋವಿನ ಸಂಗತಿ ಹೇಳಲೇಬೇಕು. ಅದು ಈ-ಟಿವಿ ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ. ಅದರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತೀರ್ಪು ನೀಡಲೆಂದು ಗಾಯನ ಲೋಕದ ದಿಗ್ಗಜರನ್ನು ಕರೆಸುತ್ತಾರಷ್ಟೇ? ಹಾಗೆ ಬಂದಿದ್ದ ಭಾಗವತರೊಬ್ಬರು, ಎಸ್‌ಪಿಬಿ ಅವರು 'ಯಕ್ಷಗಾನ ಹಾಡುಗಾರಿಕೆಯಲ್ಲಿ ಮಹಿಳೆಯರು ಯಾರೂ ಇಲ್ಲವೇ' ಎಂದು ಕೇಳಿದಾಗ ನಕಾರಾತ್ಮಕ ಉತ್ತರ ನೀಡಿದ್ದು! ಅಂತಹಾ ಅದೆಷ್ಟೋ ಸಂಗತಿಗಳನ್ನು, ಎಲ್ಲ ಕ್ಷೇತ್ರದಲ್ಲಿಯೂ ಇರುವಂತಹಾ ಮಾತ್ಸರ್ಯಗಳನ್ನು, ದಬ್ಬಾಳಿಕೆಗಳನ್ನು, ಉಡಾಫೆಯ ವರ್ತನೆಗಳನ್ನು, ಸಹಿಸಿಕೊಂಡು, ತಾನಾಯಿತು, ತನ್ನ ಯಕ್ಷಗಾನವಾಯಿತು ಎನ್ನುತ್ತಲೇ ನಿರ್ಲಕ್ಷಿಸಿ, ದಿಟ್ಟವಾಗಿ ಮೇಲೆ ಬಂದವರು ಲೀಲಾ.

ನಿವೃತ್ತಿ ಇಲ್ಲದ ಏಕೈಕ ವೃತ್ತಿಯೆಂದರೆ ಅದು ಕಲೆ. ಹೀಗಾಗಿ ಈ ಇಳಿ ಹರೆಯದಲ್ಲಿ ಅವರ ಭಾಗವತಿಕೆಯನ್ನು, ಸಾಂಪ್ರದಾಯಿಕ ಯಕ್ಷಗಾನದ ಸೊಗಡನ್ನು ಗುರುತಿಸಿದವರು ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಕರೆಯುತ್ತಿರುತ್ತಾರೆ. ಇತ್ತೀಚೆಗೆ ತೆಂಕು ಭಾಗದವರಂತೆಯೇ ಬಡಗು ಭಾಗದವರಿಗೂ ಅವರ ಹಾಡುಗಾರಿಕೆ ಬಹುವಾಗಿ ಇಷ್ಟವಾಗಿದೆ. ಬಡಗು ತಿಟ್ಟಿನ ಕಲಾವಿದರೇ ಹೇಳಿದ ಮಾತು - ನಮ್ಮಲ್ಲಿ ಇಂತಹವರು ಇಲ್ಲವಲ್ಲಾ ಅಂತ! ಹೀಗಾಗಿ ಆ ಕಡೆಯಿಂದ ಹೆಚ್ಚು ಹೆಚ್ಚು ಆಹ್ವಾನಗಳು, ಸನ್ಮಾನಗಳು ದೊರೆಯುತ್ತಿವೆ. ಬೆಂಗಳೂರಿನಲ್ಲಿಯೂ ಕೆಲವೊಂದು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಪುಟ್ಟ ಮಕ್ಕಳಿಗೆ ಭಾಗವತಿಕೆ ಪಾಠ ಮಾಡುತ್ತಾರೆ, ಹೆಣ್ಣು ಮಕ್ಕಳ ಯಕ್ಷಗಾನ ತಂಡಕ್ಕೆ ಆಧಾರ ಸ್ತಂಭವೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆ ಬಳಿಯ ತಲಕಳ ಎಂಬ ಊರಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಅವರ ಕಲಾ ಸೇವೆ ನಿರಂತರವಾಗಿದೆ. ಇವಿಷ್ಟು ಇಲ್ಲಿ ಹೇಳಲೇಬೇಕಾಯಿತೇಕೆ ಎಂದರೆ, ಲೀಲಾ ಬೈಪಾಡಿತ್ತಾಯರು ನನ್ನ ಹೆಮ್ಮೆಯ ಅಮ್ಮ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada