ಭಾರತದ ಅತ್ಯಂತ ಜನಪ್ರಿಯ ಜೈನ ತೀರ್ಥ ಕ್ಷೇತ್ರಗಳಲ್ಲಿ ಶ್ರೀಮಹಾವೀರ್‌ಜಿ ಕ್ಷೇತ್ರವೂ ಒಂದು. 24ನೇ ಜೈನ ತೀರ್ಥಂಕರ ಮಹಾವೀರನ ಈ ಮಂದಿರವನ್ನು ಗಂಭೀರ್ ನದಿ ತಟದಲ್ಲಿ ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಆಕರ್ಷಕವಾಗಿರುವ ಈ ಮಂದಿರಕ್ಕೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯೂ ಇದೆ.
ಸುಮಾರು ಎರಡು ಶತಮಾನಗಳ ಹಿಂದೆ, ಹಸುವೊಂದಿತ್ತು. ಅದು ಬೆಳಿಗ್ಗೆ ಮನೆ ಬಿಟ್ಟರೆ ಸಾಯಂಕಾಲ ಹಿಂದಿರುಗಿ ಬರುತ್ತಿತ್ತು. ಇದರಲ್ಲೇನೂ ಹೊಸ ವಿಷಯ ಇರಲಿಲ್ಲ. ಆದರೆ ಅದು ಹಿಂತಿರುಗಿ ಬರುವಾಗ ಅದರ ಕೆಚ್ಚಲು ಖಾಲಿ ಖಾಲಿ. ಈ ನಿಗೂಢವನ್ನು ಭೇದಿಸಲು, ಒಂದು ದಿನ ಆಕಳಿನ ಮಾಲೀಕರ ಮಗ ಅದನ್ನೇ ಅನುಸರಿಸಿದ.
ಹಸು ಒಂದು ನಿರ್ದಿಷ್ಟ ಜಾಗದಲ್ಲಿ ನಿಲ್ಲುತ್ತಿತ್ತು, ಮತ್ತು ತನ್ನ ಕೆಚ್ಚಲಿನಿಂದ ಹಾಲನ್ನೆಲ್ಲಾ ಖಾಲಿ ಮಾಡಿಸುತ್ತಿತ್ತು ಎಂಬುದನ್ನು ಕಂಡುಕೊಂಡನಾತ. ತೀವ್ರ ಕುತೂಹಲಗೊಂಡ
ದನಗಾಹಿಗಳು, ಆ ಸ್ಥಳವನ್ನು ಅಗೆದರು. ಅಗೆದಾಗ ಶ್ರೀ ಮಹಾವೀರನ ವಿಗ್ರಹವೊಂದು ದೊರೆಯಿತು. ಇದು ಮಹಾವೀರನ ಮೂರ್ತಿಯ ಹಿನ್ನೆಲೆ.
ಅಮೃತ ಶಿಲೆಯ ಮೇಲೆ ಕಟ್ಟಿರುವ ಈ ಸುಂದರ ಮಹಾವೀರ ಮಂದಿರವು ಪುರಾತನ ಮತ್ತು ಆಧುನಿಕ ಜೈನ ಶಿಲ್ಪಕಲೆಯ ಪ್ರತೀಕ. ಪ್ರಾಚೀನ ಜೈನ ಮಂದಿರಗಳು ಅದ್ಭುತ ಅಲಂಕಾರ ಮತ್ತು ಕೆತ್ತನೆ ಕೆಲಸದಿಂದ ರಾರಾಜಿಸುತ್ತಿದ್ದರೆ, ಮಹಾವೀರ ಮಂದಿರವು ಸಮಕಾಲೀನ ವಿನ್ಯಾಸವನ್ನು ಹೊಂದಿದೆ. ಹೆಚ್ಚಿನ ಜೈನ ಮಂದಿರಗಳಂತೆಯೇ, ಇದು ಕೂಡ ಸಣ್ಣ ಗುಡಿಗಳ ಸಂಕೀರ್ಣ. ಮುಖ್ಯ ಮಂದಿರದ ಒಳಗೆ ಜೈನ ತೀರ್ಥಂಕರರ ವಿಗ್ರಹಗಳು ಸೂಕ್ಷ್ಮವಾಗಿ ಕೆತ್ತಲಾದ ಕಂಬಗಳಿಂದ ಆವೃತವಾಗಿವೆ.