Webdunia - Bharat's app for daily news and videos

Install App

ಭೂತಾರಾಧನೆಯ ಬೀಡು: ಕಾಸರಗೋಡು

Webdunia
ನಿಶಾಂತ್ ರಾಜ್ ಎಂ.

WD
ಕೇರಳ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ನಾಡು. ತೆಯ್ಯಂ ಇಲ್ಲಿನ ಭೂತಾರಾಧನೆ. ಇದನ್ನು ತೆಯ್ಯಾಟ್ಟಂ ಎಂದೂ ಕರೆಯುತ್ತಾರೆ. ದೈವ ಶಬ್ದದ ಮಲಯಾಳಂ ರೂಪವೇ ತೆಯ್ಯಂ.

ತೆಯ್ಯಂ ಮೂಲತಃ ಇಲ್ಲಿನ ಮೂಲ ನಿವಾಸಿ ಮತ್ತು ಆದಿವಾಸಿ ಬುಡಕಟ್ಟುಗಳ ಆರಾಧನಾ ಸಂಪ್ರದಾಯ. ಕಾಲಾಂತರದಲ್ಲಿ ಅದು ಮುಂದುವರಿದ ಜನಾಂಗಗಳ ಜೊತೆಗಿನ ಕೊಡು ಕೊಳ್ಳುವಿಕೆಯಿಂದ ಎಲ್ಲ ದೈವ-ದೇವರು, ನಂಬಿಕೆ, ಪುರಾಣ, ಆಚರಣೆ ಮಿಶ್ರಣಗೊಂಡು, ಆರಾಧನಾ ಪ್ರಕ್ರಿಯೆಯ ಜೊತೆಗೆ ಅದು ಕಲಾರೂಪವಾಗಿ ಬೆಳೆಯಿತು. ಮಾತೃದೇವತೆ, ಹುತಾತ್ಮ ವೀರರು ಹೀಗೆ ಹಲವು ವಿಧದಲ್ಲಿ ತೆಯ್ಯಂ ಸಾಮ್ರಾಜ್ಯ ಬೆಳೆಯುತ್ತದೆ. ಆ ನೆಲೆಯಲ್ಲಿ ಕಾಸರಗೋಡು ಯಕ್ಷಗಾನ, ಬೊಂಬೆಯಾಟ ಮತ್ತು ತೆಯ್ಯಂ (ಭೂತದ ಕೋಲ) ಎಂಬ ಕಲೆಗಳಿಂದ ಪ್ರಸಿದ್ಧಿ ಪಡೆದ ನಾಡಾಗಿದೆ. 'ಒಪ್ಪನ' ಮತ್ತು 'ಪುಲಿಕಳಿ' (ಹುಲಿವೇಷ) ಇಲ್ಲಿನ ಸಾಂಪ್ರದಾಯಿಕ ಕಲೆಯಾಗಿದ್ದು, ಉತ್ಸವ ಮತ್ತು ಸಮಾರಂಭಗಳಿಗೆ ಮೆರುಗನ್ನು ನೀಡುತ್ತಿದೆ.

WD
ತೆಯ್ಯಂ ಅಥವಾ ತೆಯ್ಯಾಟ್ಟಂ ಮುಖ್ಯವಾಗಿ ಉತ್ತರ ಕೇರಳದ ಅಸಾಧಾರಣ ಮತ್ತು ಪ್ರಸಿದ್ಧಿ ಹೊಂದಿದ ಧಾರ್ಮಿಕ ಕಲೆ. ನೂರಾರು ವರ್ಷಗಳ ಹಳೆಯ ಸಂಪ್ರದಾಯವನ್ನು ಹೊಂದಿರುವ ಈ ಧಾರ್ಮಿಕ ಕಲೆಯು ಪ್ರಸ್ತುತ ಕಣ್ಣೂರು ಜಿಲ್ಲೆಯ ಸಾಂಪ್ರದಾಯಿಕ ಕೊಳತ್ತುನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ತೆಯ್ಯಂ ಆರಾಧನಾ ಪದ್ಧತಿಯು ದೇವಸ್ಥಾನಗಳಲ್ಲಿ ದೇವರ ಪೂಜೆಗಿಂತ ಭಿನ್ನವಾಗಿದೆ. ಅದು ನೃತ್ಯ ಮತ್ತು ಸಂಗೀತದ ಅಪೂರ್ವ ಸಂಯೋಗವಾಗಿದೆ.

ತೆಯ್ಯಂ ಕುರಿತಾಗಿನ ಹೆಚ್ಚಿನ ಮಾಹಿತಿಗಳನ್ನು ಕೇರಳಿಗರ ಪ್ರಸಿದ್ಧ ಐತಿಹಾಸಿಕ ಪುಸ್ತಕವಾದ 'ಕೇರಳೋಪತಿ' ಯಲ್ಲಿ ವಿವರಿಸಲಾಗಿದೆ.

ಭಗವಾನ್ ಪರಶುರಾಮನು 'ಕಳಿಯಾಟಂ' ದಂತಹ ಉತ್ಸವಗಳ ಜನಕ ಎಂಬುದು ಇತಿಹಾಸ. ತೆಯ್ಯಂ ಅಥವಾ ತೆಯ್ಯಾಟ್ಟಂ ಎಂದು ಪರ್ಯಾಯ ಹೆಸರನ್ನು ಹೊಂದಿರುವ 'ಕಳಿಯಾಟ್ಟಂ' 3 ದಿನಗಳಿಂದ ಹಿಡಿದು 11 ದಿವಸಗಳ ವರೆಗೆ ಆಚರಿಸಲಾಗುತ್ತದೆ. ತೆಯ್ಯಂ ನೃತ್ಯದ ಹೊಣೆಗಾರಿಕೆಯನ್ನು ಇಲ್ಲಿನ ಪ್ರತ್ಯೇಕ ಪಾನನ್, ವೇಲನ್ ಮತ್ತು ಮಲಯನ್ ಸಮುದಾಯಕ್ಕೆ ವಹಿಸಿಕೊಟ್ಟವನು ಪರಶುರಾಮ ಎಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಸಂಗಂ ಸಾಹಿತ್ಯದಲ್ಲಿ ತೆಯ್ಯಂ ನೃತ್ಯಗಾರರಾದ ವೇಲನ್ ಕುರಿತಾಗಿನ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದು, ಅದರಲ್ಲಿರುವ ಹೇಳಿಕೆಗಳನ್ನು ವೇಲನ್ ಮತ್ತು ಇತರ ಸಮುದಾಯವು ಆಚರಿಸುತ್ತಿತ್ತು.

ಪ್ರಸ್ತುತ ತೆಯ್ಯಂ ಪದ್ಧತಿಯಲ್ಲಿ, ವೇಲನ್ ಸಮುದಾಯದ ನೃತ್ಯವು ನೂತನ ಮಾದರಿಯಾಗಿದೆ. ಇದೀಗ ಈ ಮಾದರಿಯನ್ನು ಈಗಿನ ಕಾಲಕ್ಕನುಗುಣವಾಗಿ ಬದಲಾಯಿಸುವ ಸಂಗಂ ಸಂಪ್ರದಾಯವು ಉತ್ತರ ಕೇರಳದಲ್ಲಿ 'ತೆಯ್ಯಂ' ಅಥವಾ ಭೂತಾರಾಧನೆಯ ಪ್ರಮುಖ ಪದ್ಧತಿಯಾಗಿ ಬೆಳೆದು ಬಂದಿದೆ.

ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನವನ್ನು ಹೊಂದಿರುವ ಈ ಆರಾಧನೆಯು ಈ ಪ್ರದೇಶದ ಐತಿಹಾಸಿಕ ಸ್ಥಾನಮಾನದ ಕುರುಹಾಗಿದೆ.

ಆರ್ಯನ್ ಸಂಸ್ಕೃತಿಯ ಅಪಾರ ಪ್ರಭಾವದ ನಂತರದಲ್ಲಿ, ತೈಯ್ಯಂ ಪದ್ಧತಿಯು ತನ್ನದೇ ಬುಡಕಟ್ಟಿನ ವಿಶೇಷ ಲಕ್ಷಣಗಳೊಂದಿಗೆ ಹೊಸ ಧೋರಣೆ ಮತ್ತು ಉಪಪದ್ಧತಿಗಳೊಂದಿಗೆ ಮಾರ್ಪಾಟು ಹೊಂದಿದೆ.

WD
ತೆಯ್ಯಂ ಆಚರಣೆಯಲ್ಲಿ ಮಾತೃ ದೇವತೆ ಉನ್ನತವಾದ ಸ್ಥಾನವನ್ನು ಪಡೆದಿದ್ದಾಳೆ. ಅತಿಮಾನುಷ ಚೇತನ ಆರಾಧನೆ ( spirit worship), ವೀರರ ಆರಾಧನೆ, ಮರಗಳ ಆರಾಧನೆ, ಪೂರ್ವಜರ ಆರಾಧನೆ, ನಾಗಾರಾಧನೆ, ರೋಗನಿವಾರಕ ದೇವಾರಾಧನೆ ಮತ್ತು ಗ್ರಾಮದೇವತೆಗಳ ಆರಾಧನೆಯು ಭೂತಾರಾಧನೆ ಪದ್ಧತಿಯ ವಿವಿಧ ಕವಲುಗಳು.

ಕಾಲಾಂತರದಲ್ಲಿ ಆರ್ಯನ್ ಪುರಾಣ ಮತ್ತು ಇತಿಹಾಸದ ಪ್ರಾಬಲ್ಯದಿಂದಾಗಿ ಅನೇಕ ಬ್ರಾಹ್ಮಣ ದೇವ-ದೇವತೆಗಳು ತೆಯ್ಯಂಗಳಾಗಿ ರೂಪಾಂತರವಾಗಿವೆ ಎಂಬ ನಂಬಿಕೆ. ಈ ದೇವ-ದೇವತೆಗಳೊಂದಿಗೆ ಅಸಂಖ್ಯಾತ ಜಾನಪದ ದೇವತೆಗಳು( Folk God) ಹುಟ್ಟಿಕೊಂಡವು. ಹೀಗೆ ರೂಪು ತಾಳಿದ ದೇವತೆಗಳನ್ನು ಹೆಚ್ಚಾಗಿ 'ಭಗವತಿ' ಎಂಬ ಹೆಸರಿನಲ್ಲಿ ಗುರುತಿಸುತ್ತಾರೆ.

ಬೌದ್ಧ, ಜೈನ ಮತ್ತು ಬ್ರಾಹ್ಮಣರ ಪ್ರಭಾವದಿಂದಾಗಿ ಅನೇಕ ಕೇಂದ್ರಗಳಲ್ಲಿ ದೇವ-ದೇವತೆಗಳಿಗೆ ಪ್ರಾಣಿ ಬಲಿ ನೀಡುವುದನ್ನು ತಡೆಗಟ್ಟಲಾಗಿದೆ. ಆದರೆ ಇಂತಹ ಪದ್ಧತಿಗಳನ್ನು ಈಗಲೂ ಆಚರಿಸುತ್ತಿರುವ ಕೆಲವು ದೇವಸ್ಥಾನಗಳು ಇಂತಹ ಬಲಿ ಪದ್ಧತಿಗೆ ಒಳಾವರಣವನ್ನು ಉಪಯೋಗಿಸದೆ ಪ್ರತ್ಯೇಕವಾಗಿ ದೇವಸ್ಥಾನಗಳ ಹೊರಭಾಗಕ್ಕೆ ವರ್ಗಾಯಿಸಲಾಗಿದೆ.

ಕೋಳಿ ಬಲಿ ಹರಕೆಯು ಭೂತಾರಾಧನೆಯ ಪ್ರಮುಖ ಅಂಗ. ಅನೇಕ ವರ್ಷಗಳು ನಡೆಯದ ಕಾರ್ಯವು ಭೂತ-ದೇವತೆಗಳಿಗೆ ಕೋಳಿ ಬಲಿಹರಕೆಯೊಂದಿಗೆ ಸಿದ್ಧಿಸಿದರೆ, ಭೂತಾರಾಧನೆ ವೇಳೆ ಕೋಳಿಗಳನ್ನು ನೀಡುವುದು ಶತಮಾನಗಳಿಂದ ಬಂದಂತಹ ವಾಡಿಕೆ. ಈ ಪದ್ಧತಿಯನ್ನು ಆಚರಿಸುವುದರಿಂದ ಭೂತ-ದೇವತೆಗಳು ಪ್ರಸನ್ನಗೊಳ್ಳುತ್ತಾರೆ ಎಂಬುದು ನಂಬಿಕೆ. ಆದರೆ ಇಂತಹ ವಿಧಿವಿಧಾನವನ್ನು ದೇವಸ್ಥಾನಗಳ ಗರ್ಭ ಗುಡಿಯ ಗೋಡೆಯ ಹೊರಭಾಗದಲ್ಲಿ ಕೈಗೊಳ್ಳಲಾಗುತ್ತದೆ.

WD
ಕಾಲಾಂತರದಲ್ಲಿ ಕೇರಳದಲ್ಲಿ ವೈಷ್ಣವ ಧರ್ಮವು ಹುಟ್ಟಿದ್ದು, ತೆಯ್ಯಂ ಪದ್ಧತಿಯ ಮೇಲೆ ಯಾವುದೇ ವಿಸ್ತಾರವಾದ ಪ್ರಭಾವ ಬೀರಲಿಲ್ಲ. ಇಂತಹ ವಿಶಿಷ್ಟ ರೀತಿಯನ್ನು ಕೇವಲ ಕೆಲವೇ ದೇವಾರಾಧನೆಯಲ್ಲಿ ಅನುಸರಿಸಲಾಗುತ್ತದೆ. ಈ ಮಾದರಿಯ ಪದ್ಧತಿಯನ್ನು ಆಚರಿಸುವ ಪ್ರಮುಖ ಎರಡು ವೈಷ್ಣವ ತೆಯ್ಯೆಂಗಳೆಂದರೆ 'ವಿಷ್ಣುಮೂರ್ತಿ' ಮತ್ತು 'ದೈವಥಾರ್'.

ರಕ್ತೇಶ್ವರಿ, ಚಾಮುಂಡಿ, ಸೋಮೇಶ್ವರಿ, ಕೊರತಿ ಮತ್ತು ವಿಷ್ಣುಮೂರ್ತಿಯಂತಹ ದೇವತೆಗಳನ್ನು ಕೌಟುಂಬಿಕ ದೇವರುಗಳನ್ನಾಗಿ ವಿಂಗಡಿಸಲಾಗಿದೆ. ಕುಟುಂಬ ದೇವಸ್ಥಾನಗಳಲ್ಲಿ ಆಚರಿಸುವ ಧಾರ್ಮಿಕ ವಿಧಿವಿಧಾನವು ಬ್ರಾಹ್ಮಣ ದೇವಸ್ಥಾನಗಳಿಗಿಂತ ಭಿನ್ನವಾಗಿರುತ್ತದೆ. ಬಹಳ ಮುಖ್ಯವಾದ ವಿಷಯವೆಂದರೆ ಈ ಭೂತಾರಾಧನೆ ಪದ್ಧತಿಗೆ ಇಸ್ಲಾಂ ಅನುಯಾಯಿಗಳೂ ಕೈಜೋಡಿಸುತ್ತಾರೆ. 'ಮಾಪಿಳ್ಳ' ಪಾತ್ರವಾದ ಆಲಿ ಚಾಮುಂಡಿಯೂ ಈ ಪದ್ಧತಿಯಲ್ಲಿ ಒಳಗೊಂಡಿದೆ. ಆಲಿ ಚಾಮುಂಡಿ ದೇವಸ್ಥಾನದ ಆಲಿ ಚಾಮುಂಡಿ ಆರಾಧನೆಯು ಕಾಸರಗೋಡಿನ ಕುಂಬಳೆ ಎಂಬಲ್ಲಿ ಜನಪ್ರಿಯವಾಗಿದೆ.

ಕೆಳವರ್ಗಗಳಿಂದ ಹಿಡಿದು ಬ್ರಾಹ್ಮಣರವರೆಗೆ, ಸಮಾಜದ ಎಲ್ಲ ವರ್ಗದ ಜನರೂ ತೆಯ್ಯಂ ಆರಾಧನೆಗಳಲ್ಲಿ ಭಾಗವಹಿಸುತ್ತಾರೆ. ಇದೊಂದು ಸಾಮೂಹಿಕ ಆರಾಧನೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆಯ್ಯಂ ನೃತ್ಯವನ್ನು ಸಾಮಾನ್ಯವಾಗಿ ಗ್ರಾಮೀಣ ದೇವಸ್ಥಾನಗಳಲ್ಲಿ ಮತ್ತು ಕೌಟುಂಬಿಕ ದೇವಸ್ಥಾನಗಳಲ್ಲಿ ಹಳೆಯ ಕಾಲದಿಂದಲೂ ನಮ್ಮ ಪೂರ್ವಜರು ಆಚರಿಸುತ್ತಾ ಬರುತ್ತಿದ್ದಾರೆ.

ತನ್ನದೇ ಆದ ವ್ಯವಸ್ಥೆ ಮತ್ತು ಪ್ರಾಮುಖ್ಯತೆಗಳೊಂದಿಗೆ ದೈವಸ್ಥಾನಗಳಲ್ಲಿ ಪ್ರತ್ಯೇಕ ದೇವತೆಯ ನೃತ್ಯವು 12ರಿಂದ 24 ತಾಸುಗಳವರೆ ಅಲ್ಪ ಬಿಡುವಿನೊಂದಿಗೆ ಜರುಗುತ್ತದೆ. ದೈವಸ್ಥಾನದ ಗರ್ಭಗುಡಿಯಲ್ಲಿರುವ ಕೇಂದ್ರ ದೇವತೆಯನ್ನು ಪ್ರಸನ್ನಗೊಳಿಸುವ ಮುಖ್ಯ ನೃತ್ಯಗಾರನು ಒಂದು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಾನೆ. ಅದಕ್ಕೆ 'ಅಣಿಯರ' ಎಂದು ಕರೆಯುತ್ತಾರೆ. ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಮುಖ್ಯ ವೇಷಧಾರಿಯು ಸಸ್ಯಹಾರ ಮತ್ತು ಉಪವಾಸ ವ್ರತವನ್ನು ಅನುಸರಿಸಲೇಬೇಕು. ಸೂರ್ಯಾಸ್ತಮಾನದ ನಂತರ ನೃತ್ಯಗಾರನು ಏನನ್ನೂ ಸೇವಿಸುವುದಿಲ್ಲ.

WD
ಅವನ ಮುಖವರ್ಣಿಕೆ ಸೇರಿದಂತೆ ವೇಷಭೂಷಣವನ್ನು ಈ ಕಲೆಯಲ್ಲಿ ನುರಿತವರು ಕಟ್ಟುತ್ತಾರೆ. ಈ ಪದ್ಧತಿಯ ಮೊದಲ ಆಚರಣೆಯನ್ನು 'ಥೊಟ್ಟಂ' ಅಥವಾ 'ವೆಳ್ಳಾಟಂ' ಎಂದು ಕರೆಯುತ್ತಾರೆ. ಮೊದಲ ಹಂತದ ಆಚರಣೆ ಸಂದರ್ಭದಲ್ಲಿ ನೃತ್ಯಗಾರನು ಕೆಂಪು ವಸ್ತ್ರವನ್ನು ಧರಿಸುತ್ತಾನೆಯೇ ವಿನಹ ಯಾವುದೇ ವೇಷಭೂಷಣಗಳಿಂದ ಅಲಂಕೃತನಾಗಿರುವುದಿಲ್ಲ.

ತೆಯ್ಯಂ ಆಡುವವರು, ಕೋಲ ಕಟ್ಟುವವರು ಬುಡಕಟ್ಟು ಜನಾಂಗದವರೇ ಆಗಿರುತ್ತಾರೆ. ಆರಾಧನೆಯ ಕೆಲವು ಘಟ್ಟಗಳು ಮಾತ್ರ ಹಗಲಿನಲ್ಲಿ ನಡೆದು, ಪ್ರಧಾನ ಅಂಶಗಳೆಲ್ಲವೂ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ. ಚೆಂಡೆ, ಡಮರು, ದುಡಿ ವಿವಿಧ ಹಿಮ್ಮೇಳಗಳೊಂದಿಗೆ ದೈವವನ್ನು ಆವಾಹಿಸುವ ಹಾಡನ್ನು ಮೊದಲು ಹಾಡುತ್ತಾರೆ. ಆಗಲೇ ತೆಯ್ಯಂ ಕೋಲಕಟ್ಟಿದ ಪಾತ್ರಿಯಲ್ಲಿ ಶಕ್ತಿಯು ಆವಾಹಿತವಾಗುತ್ತದೆ. ಆವೇಶದ ನಂತರ ಹಾಡುಗಾರರು ಆ ತೆಯ್ಯಂನ ಇತಿಹಾಸ ಪುರಾಣ, ಪರಾಕ್ರಮಗಳನ್ನು ವರ್ಣಿಸುವ ತೊಟ್ಟಂಪಾಟ್ಟ್‌‌ನ್ನು ಹಾಡುತ್ತಾರೆ. ಪಾತ್ರಿ ಆವೇಶ ಏರಿದಂತೆ ಕಥೆಯನ್ನು ಅಭಿನಯಿಸಲು ತೊಡಗುತ್ತಾನೆ. ಆಗ ಕತ್ತಿವರಸೆ, ಬೆಂಕಿಯ ಆಟ ಮೊದಲಾದವುಗಳ ಮೂಲಕ ದೈವ ತನ್ನ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತದೆ. ತೆಯ್ಯಂನ ಪ್ರಧಾನ ಆಕರ್ಷಣೆ ಇರುವುದು ಅವುಗಳ ವೇಷ ಭೂಷಣಗಳಲ್ಲಿ.

ತೆಯ್ಯಂ ನೃತ್ಯವು ಅನೇಕ ಪ್ರಕಾರಗಳನ್ನು ಹೊಂದಿದ್ದು, ಇದನ್ನು 'ಕಳಸಂ' ಎಂದು ಕರೆಯುತ್ತಾರೆ. ಪ್ರತಿ ಕಳಸವನ್ನು ನೃತ್ಯಗಾರನು ಹಂತಹಂತವಾಗಿ ಅಭಿನಯಿಸುತ್ತಾನೆ.

ವೆಣ್ಣಾನ್, ಮಲಯನ್, ವೇಲನ್, ಮಾವಿಲನ್, ಪುಲಯನ್ ಮತ್ತು ಕೊಪ್ಪಾಳನ್ ಎಂದು ಕರೆಯುವ ಜನಾಂಗದ ಪುರುಷರು ದೇವಸ್ಥಾನಗಳಲ್ಲಿ ಈ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿ ಕೊಡುತ್ತಾರೆ. ಈ ವರ್ಗವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಗೊಂಡವರಾಗಿರುತ್ತಾರೆ. ಅವರು ತೆಯ್ಯಂ ನೃತ್ಯದ ಏಕಮಾತ್ರ ಮೇಲ್ವಿಚಾರಕರಾಗಿರುತ್ತಾರೆ. ತೆಯ್ಯಂ ವೃತ್ತಿ-ಕಲೆಯನ್ನು ಕೆಲವು ಸೂಕ್ತ ಸಮಯದಲ್ಲಿ ಮಾತ್ರ ನಡೆಸಲಾಗುತ್ತದೆ.

WD
ತೆಯ್ಯಂ ಭೂತಾರಾಧನೆಯು ಪ್ರಮುಖವಾಗಿ ಸ್ಥಳೀಯ ಶೂರರ ಮತ್ತು ವೀರನಾರಿಯರ ಬಲಿದಾನಗಳನ್ನು ವಿವರಿಸುವ ಸ್ಥಳೀಯ ಇತಿಹಾಸವಾಗಿದೆ. ಇದರಲ್ಲಿ ಬರುವ ಕೆಲವು ಹಾಡುಗಳು ತುಳುನಾಡಿನ ಪಾಡ್ದನಗಳ ಇತಿಹಾಸವನ್ನು ಬಿಂಬಿಸುತ್ತದೆ. ಈ ಪರಾಕ್ರಮಿಗಳಿಗೆ ದೈವತ್ವವನ್ನು ನೀಡಿ ಗೌರವಿಸಲಾಗುತ್ತಿದೆ.

ಮಧ್ಯಕಾಲೀನ ಪರಾಕ್ರಮಿಗಳಾದ ಕತಿವನ್ನೂರ್ ವೀರನ್ ಮತ್ತು ತಚ್ಚೋಳಿ ಒದೆಯನ್ ಅವರು ಹುತಾತ್ಮ ವೀರರಾಗಿದ್ದು, ಅವರ ಸ್ಥಳೀಯ ಇತಿಹಾಸವನ್ನು ಹಾಡಲಾಗುತ್ತದೆ.

ಪುದಿಯ (ಹೊಸ) ಭಗವತಿ ಮತ್ತು ಮಕ್ಕಂ ಅವರು ಈ ಭಯಾನಕ ಕಥೆಗಳ ವೀರ ನಾರಿಯರು. ಅವರ ಕುರಿತು ಬಾಯಿ ಮಾತಿನಲ್ಲಿ ಕೇಳಿಬರುವ ಕಥೆಗಳು ಈ ರೀತಿ ಇವೆ: ಮಕ್ಕಂ ಓರ್ವ ನೀತಿಗೆಟ್ಟ ಮಹಿಳೆ ಎಂದು ಅವಳ ಸಹೋದರರು ನಂಬಿಕೊಂಡಿದ್ದರು. ಈ ಎಲ್ಲಾ ಸಹೋದರರ ಹೆಂಡತಿಯರು 'ಮಕ್ಕಂ'ಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು. ಬಳಿಕ ಮಾತ್ಸರ್ಯದಿಂದ ಉರಿಯುತ್ತಿದ್ದ ಸಹೋದರರು ಮತ್ತು ಪತ್ನಿಯರು ಸೇರಿಕೊಂಡು ಮಕ್ಕಂ ಮತ್ತು ಆಕೆಯ ಮಕ್ಕಳನ್ನು ಆಳವಾದ ಬಾವಿಗೆ ಎಸೆಯುತ್ತಾರೆ. ಬಾವಿಯಲ್ಲೇ ಕೊನೆಯುಸಿರೆಳೆದ ಬಳಿಕ ಆಕೆಗೆ ದೈವತ್ವವನ್ನು ಕಲ್ಪಿಸಿ ಆರಾಧಿಸಲು ಆರಂಭಿಸಲಾಯಿತು. ಸ್ಥಳೀಯ ಕುಟುಂಬದಲ್ಲಿ ನಡೆದ ಈ ಘಟನೆಯು ನಂತರದಲ್ಲಿ ತೆಯ್ಯಂ ದೇವತೆಯ ಪ್ರಮುಖ ವಿಷಯವಾಯಿತು.

ಅನೇಕ ಮಕ್ಕಳನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಬೇಕು ಎಂಬುದಾಗಿ ಸ್ಥಳೀಯ ಮುಖ್ಯಸ್ಥನೊಬ್ಬನ ಇಚ್ಛೆಯಾಗಿತ್ತು. ಇದಕ್ಕೆ ಅವಳು ಪ್ರತಿರೋಧವನ್ನು ವ್ಯಕ್ತಪಡಿಸಿದ್ದಳು. ಪರಿಣಾಮವಾಗಿ ಅವಳನ್ನು ತೇಲುತ್ತಿರುವ ರಂಧ್ರವಿರುವ ಹಡಗಿನೊಳಗೆ ಎಸೆಯಲಾಯಿತು. ಅಲ್ಲದೆ ಹೊತ್ತಿ ಉರಿಯುತ್ತಿರುವ ದೀಪದ ಬತ್ತಿಯಿಂದ ಆಕೆಯ ತಲೆಯನ್ನು ಸುಡಲಾಯಿತು. ಈ ಘಟನೆಯ ನಂತರದಲ್ಲಿ ಸಮಾಜವು ಅವಳ ಸ್ಮರಣೆಯನ್ನು ಜೀವಂತವಾಗಿರಿಸಿದ್ದು, ಅವಳನ್ನು ದೇವತೆ ಎಂದು ಪರಿಗಣಿಸಿ 'ಪುದಿಯ ಭಗವತಿ' ಎಂದು ನಾಮಕರಣ ಮಾಡಿದರು. ಇವಳು ರೋಗರುಜಿನಗಳ ನಿವಾರಕ ದೇವತೆ ಮತ್ತು ಸಿಡುಬು ನಿವಾರಕ ದೇವತೆ. ಹೀಗೆ ಸ್ಥಳೀಯ ಇತಿಹಾಸವು ತೆಯ್ಯಂ ಕಥೆಗಳಾಗಿ ರೂಪಾಂತರ ಹೊಂದಿದವು.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments