Select Your Language

Notifications

webdunia
webdunia
webdunia
webdunia

ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ

ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
ಟಿ.ಶಶಿಮೋಹನ್
ಕೇರಳದ ಕೋಟ್ಟಯಂನವರಾದ ಸಿಸ್ಟರ್ ಅಲ್ಫೋನ್ಸಾ ಅವರನ್ನು ಭಾನುವಾರ ವ್ಯಾಟಿಕನ್‌ನಲ್ಲಿ ಪೋಪ್ ಅವರು ಅಧಿಕೃತವಾಗಿ ಸಂತ ಪದವಿ ಘೋಷಿಸುವ ಮೂಲಕ ಇದು ಕೇರಳ ಮತ್ತು ಭಾರತದಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಅವಿಸ್ಮರಣೀಯ ದಿನವಾದಂತಾಗಿದೆ.

ಪೋಪ್ ಬೆನೆಡಿಕ್ಟ್- XVI ಅವರು ರೋಮ್‌ನ ಸೈಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಆಕೆಗೆ ಸಂತ ಪದವಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತದ ಮೊದಲ ಮಹಿಳಾ ಸಂತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ಸಂದರ್ಭ ಭಾರತ ಸರಕಾರವು ಸಂತ ಅಲ್ಫೋನ್ಸಾ ನೆನಪಿಗೆ ವಿಶೇಷ ನಾಣ್ಯವನ್ನೂ ಹೊರತರಲಿದೆ.

ಸಿಸ್ಟರ್ ಅಲ್ಫೋನ್ಸಾ ಈಗ ಸಂತ ಅಲ್ಫೋನ್ಸಾ ಆಗುತ್ತಿದ್ದಾರೆ. ಯೇಸುವಿನ ನಿಜ ಬೆಂಬಲಿಗರಾದ ಈ ಸಿಸ್ಟರ್, ಪ್ರೀತಿಯ ಬೆಳಕಾಗಿ ತಮ್ಮ ಜೀವನ ಸವೆಸಿದವರು. ಆಕೆಯನ್ನು ಪ್ರೀತಿಯ ದೀಪಸ್ತಂಭವೆಂದೇ ಕರೆಯಬಹುದು. ಶುದ್ಧ ಹೃದಯದ ಈ ನನ್, ದೇವರನ್ನು ಒಪ್ಪಿಕೊಂಡವರು, ಅಪ್ಪಿಕೊಂಡವರು.

ಅವರ ಜೀವನ ಅತ್ಯಂತ ಕಿರು ಅವಧಿಯದಾದರೂ ಆಕೆ ಮಾಡಿದ್ದು ಮಹಾನ್ ಸಾಧನೆ. 1910ರ ಆಗಸ್ಟ್ 19ರಂದು ಕೇರಳದ ಕುಡಮಲೂರ್ ಪ್ರದೇಶದಲ್ಲಿ ಜೋಸೆಫ್ ಮತ್ತು ಮೇರಿ ದಂಪತಿಯ ನಾಲ್ಕನೇ ಮಗುವಾಗಿ ಜನಿಸಿದ ಅಲ್ಫೋನ್ಸಾ ಅವರ ಪ್ರೀತಿಯ ಹೆಸರು ಅಣ್ಣಾಕುಟ್ಟಿ.

ಮೂರೂವರೆ ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಅಣ್ಣಾಕುಟ್ಟಿ, ತಮ್ಮ ಸೋದರತ್ತೆ ಅಣ್ಣಮ್ಮ ಮುರಿಕ್ಕನ್ ಅವರ ಆಶ್ರಯದಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಸಂತ ತೆರೇಸಾ ಅವರ ದೂರದೃಷ್ಟಿಯಿಂದ ಆಕರ್ಷಿತರಾದ ಅವರು, ನನ್ ಆಗುವತ್ತ ಮನ ಮಾಡಿದರು ಹಾಗೂ ಎಲ್ಲಾ ವೈವಾಹಿಕ ಪ್ರಸ್ತಾಪಗಳನ್ನು ತಿರಸ್ಕರಿಸಿದರು.

ಆದರೆ ಕುಟುಂಬಿಕರು ಮದುವೆಗೆ ಒಪ್ಪುವಂತೆ ಬಲವಂತ ಮಾಡಿದಾಗ, ಹಠ ಹಿಡಿದ ಅಣ್ಣಾಕುಟ್ಟಿ, ಸುಡುತ್ತಿದ್ದ ಹೊಟ್ಟಿನ ರಾಶಿಯಲ್ಲಿ ಕಾಲಿರಿಸಿ ಸುಟ್ಟುಕೊಂಡಿದ್ದರು. ಇದರಿಂದಾಗಿ ಕುಟುಂಬಿಕರು ಆಕೆಗೆ ಕಾನ್ವೆಂಟ್ ಸೇರಲು ಅನುಮತಿ ನೀಡುವಂತಾಗಿತ್ತು.

1927ರಲ್ಲಿ ಪೆಂತಕೋಸ್ಟ್ ಹಬ್ಬದಂದು, ಅವರನ್ನು ಭರನಗನಂ ಎಂಬಲ್ಲಿನ ಕ್ಲಾರಿಸ್ಟ್ ಕಾನ್ವೆಂಟ್‌ಗೆ ಸೇರಿಸಲಾಯಿತು. 1928ರ ಆಗಸ್ಟ್ 2ರಂದು ಅವರಿಗೆ ಅಲ್ಫೋನ್ಸಾ ಎಂದು ನಾಮಕರಣ ಮಾಡಲಾಯಿತು.

ಅವರದೊಂದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಪ್ರಪಂಚದ ಕಣ್ಣಿಗೆ ಆಕೆ ಮಹತ್ಸಾಧನೆಯನ್ನೇನೂ ಮಾಡಲಿಲ್ಲ. ಎಲ್ಲವನ್ನೂ ಅವರು ವಿಶಾಲ ದೃಷ್ಟಿಕೋನದಿಂದ ನೋಡುತ್ತಿದ್ದರು. ದೈವೀಕ ಪ್ರಜ್ಞೆಯು ಆಕೆಯ ಹೃದಯದಲ್ಲಿ ಅರಳುತ್ತಿತ್ತು ಮತ್ತು ಅದುವೇ ಈಗ ಆಕೆಗೆ ಸಂತ ಪದವಿಯನ್ನೂ ತಂದು ಕೊಟ್ಟಿದೆ.

ಭೂಮಿಯ ಮೇಲೆ ಆಕೆ ಬದುಕಿದ್ದು ಕೇವಲ 36 ವರ್ಷ ಮಾತ್ರ. 1946ರ ಜುಲೈ 28ರಂದು ಯೇಸು ಪಾದ ಸೇರಿದ ಆಕೆಯ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.

ಆಕೆಯ ಸಮಾಧಿ ತಾಣವನ್ನು ಸಂದರ್ಶಿಸಿದ ಜನರಿಗೆ ಅದೆಷ್ಟೋ ಪವಾಡಗಳ ಅನುಭವವಾಗಿದೆ. ಅಲ್ಲಿಗೆ ಬಂದ ರೋಗಿಗಳು ಪವಾಡ ಸದೃಶವಾಗಿ ಗುಣಮುಖರಾಗಿದ್ದಾರೆ. ಅದರಲ್ಲಿ ಅತ್ಯಂತ ಉಲ್ಲೇಖಾರ್ಹವಾದುದು ಮತ್ತು ಆಕೆಯ ಸಂತ ಪದವಿಗೆ ಅಧಿಕೃತವಾಗಿ ಪರಿಗಣಿಸಲ್ಪಟ್ಟ ಪವಾಡ ಕಥನ ಜಿನಿಲ್ ಎಂಬ ಮಗುವಿನದು.

ಕೋಟ್ಟಯಂ ಜಿಲ್ಲೆಯ ಶಾಜಿ ಮತ್ತು ಲಿಸ್ಸಿ ಒಳುತೊಟ್ಟಿ ಮುನ್ನಾರಪಾರ ಎಂಬವರಿಗೆ ಜನಿಸಿದ ಜಿನಿಲ್ ಎಂಬ ಮಗು ಹುಟ್ಟಿನಿಂದಲೇ ವಕ್ರಪಾದ ಹೊಂದಿತ್ತು. ಏಟ್ಟುಮಾನೂರಿನ ವಿಮಲಾ ಆಸ್ಪತ್ರೆಯಲ್ಲಿ ಈ ಸೊಟ್ಟಗಿನ ಕಾಲುಗಳುಳ್ಳ ಮಗು ಜನಿಸಿತ್ತು. ಹೆತ್ತವರು ತೀವ್ರವಾಗಿ ನೊಂದುಕೊಂಡಿದ್ದರು.

ಆಸ್ಪತ್ರೆಗೆ ಮೊರೆ ಹೋದರವರು. ವೈದ್ಯರು ಚಿಕಿತ್ಸೆ ಆರಂಭಿಸಿದರು. ಮಗುವಿನ ಎರಡೂ ಕಾಲುಗಳಿಗೆ ಪ್ಲಾಸ್ಟರ್ ಹಾಕಲಾಯಿತು. ಮಗುವಿಗೆ ಇದು ತೀರಾ ಕಿರಿಕಿರಿಯಾಗುತ್ತಿತ್ತು ಮತ್ತು ಅಳು ನಿಲ್ಲಿಸಲೇ ಇಲ್ಲ. ಹೆತ್ತವರು ಮತ್ತೆ ವೈದ್ಯರಲ್ಲಿ ಕಷ್ಟ ತೋಡಿಕೊಂಡರು.

ಇಂತಹ ಕೇಸುಗಳಲ್ಲಿ ಇದು ಬಿಟ್ಟು ಬೇರೇನೂ ಮಾಡುವುದು ಸಾಧ್ಯವಿಲ್ಲ ಎಂಬುದು ವೈದ್ಯರ ಹೇಳಿಕೆ. ಈ ಸಂದರ್ಭ ಸಿಸ್ಟರ್ ಅಲ್ಫೋನ್ಸಾ ಮತ್ತು ಆಕೆಯ ಪವಾಡ ಶಕ್ತಿಯ ಬಗ್ಗೆ ಲಿಸ್ಸಿ ದಂಪತಿ ಕೇಳಿದ್ದರು. ಅವರು ಆ ಮಗುವನ್ನು ಸಿಸ್ಟರ್ ಅಲ್ಫೋನ್ಸಾ ಅವರ ಸಮಾಧಿ ಬಳಿ ತೆಗೆದುಕೊಂಡು ಹೋದರು. ಮಗುವನ್ನು ಸಮಾಧಿ ಮೇಲಿರಿಸಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಅದೇ ದಿನ, ಸಂಜೆಯ ಪ್ರೇಯರ್ ವೇಳೆಗೆ, ಜಿನಿಲ್ ಕುಟುಂಬಕ್ಕೆ ಅಚ್ಚರಿ ಕಾದಿತ್ತು. ಈ ಮಗು ತನ್ನ ಕಾಲ ಮೇಲೆ ತಾನೇ ನಿಂತು ನಡೆಯತೊಡಗಿತ್ತು. ಇದನ್ನು ನೋಡಿದ ಹೆತ್ತವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇಂಥ ಹತ್ತು ಹಲವು ಪವಾಡಗಳಿಗೆ ಕಾರಣೀಕರ್ತರಾಗಿದ್ದ ಸಿಸ್ಟರ್ ಈಗ ಸಂತ ಪದವಿ ಪಡೆದಿರುವುದು ದೇಶದ ಕ್ರೈಸ್ತ ಸಮುದಾಯಕ್ಕೆ ಸಂಭ್ರಮೋಲ್ಲಾಸ ತಂದಿರುವ ಸಂಗತಿಯಾಗಿದೆ.

Share this Story:

Follow Webdunia kannada