Select Your Language

Notifications

webdunia
webdunia
webdunia
webdunia

ಉತ್ತರ ಧ್ರುವದ ಸಾಂತಾ ಕ್ಲಾಸ್ ಹೌಸ್ ಕಥೆ

ಉತ್ತರ ಧ್ರುವದ ಸಾಂತಾ ಕ್ಲಾಸ್ ಹೌಸ್ ಕಥೆ
PTI
ಶ್ರುತಿ ಅಗರ್‌ವಾಲ್
ಬಿಳಿ ಗಡ್ಡ, ಕೆಂಪು ಮಕ್ಮಲ್ ದಿರಿಸು, ಎರಡೂ ಭುಜಗಳಲ್ಲಿ ಉಡುಗೊರೆಗಳಿಂದ ತುಂಬಿದ ಚೀಲ... ಇವಿಷ್ಟು ಹೇಳಿದರೆ ಪುಟ್ಟ ಮಕ್ಕಳ ಪ್ರೀತಿಯ ಸಂತಾ ಕ್ಲಾಸ್ ನೆನಪಾಗುತ್ತಾನೆ. ಈ ಹೆಸರು ಕೇಳಿದರೆ ಪುಟಾಣಿಗಳ ಕಿವಿ ನಿಮಿರುತ್ತದೆ, ಆಸೆ ಚಿಗುರೊಡೆಯುತ್ತದೆ.

ಚಿಕ್ಕಮಕ್ಕಳಿರುವಾಗಿಂದ ಹಿಡಿದು ಇದುವರೆಗೆ ನಾವು ಅದೆಷ್ಟೋ ಬಾರಿ ಸಾಂತಾ ಕ್ಲಾಸ್ ಎಂಬ ಜೀವಂತ, ಸದಾನಂದವಾಗಿರುವ ಉಡುಗೊರೆ ನೀಡುವಾತನ ಬಗ್ಗೆ ಕೇಳಿದ್ದೇವೆ. ಆದರೆ ಈ ಸಾಂತಾ ಕ್ಲಾಸ್‌ನ ಪ್ರೀತಿಯನ್ನು ಕೈಯಾರೆ ಪಡೆಯುವ, ಕಣ್ಣಾರೆ ಕಾಣುವ ಒಂದು ತಾಣ ಈ ವಿಶ್ವದಲ್ಲಿದೆ. ಅದುವೇ ಉತ್ತರ ಧ್ರುವದಲ್ಲಿರುವ ಸಾಂತಾ ಹೌಸ್. ಇದರ ಹಿಂದಿನ ಕಥೆಯೊಂದನ್ನು ನೋಡೋಣ.

ಕಾನ್ ಮತ್ತು ನೀಲೀ ಮಿಲ್ಲರ್ ದಂಪತಿ 1949ರಲ್ಲಿ ಅಲಸ್ಕಾದ ಫೇರ್‌ಬ್ಯಾಂಕ್ಸ್‌ಗೆ ಬಂದಿಳಿದಾಗ ಅವರ ಬಳಿ ಇದ್ದದ್ದು ಕೇವಲ 1.40 ಡಾಲರ್ ನಗದು ಮತ್ತು ಇಬ್ಬರು ಹಸಿದ ಮಕ್ಕಳು. ಅಲಸ್ಕಾ ಪ್ರಾಂತ್ಯದಲ್ಲೇ ನೆಲೆಸಲು ನಿರ್ಧರಿಸಿದ್ದ ಕಾನ್, ವ್ಯಾಪಾರಿಯಾಗಿ ಪರಿವರ್ತಿತರಾಗಿ, ಸುತ್ತಮುತ್ತಲಿನ ಹಳ್ಳಿಗಳಿಂದ ಉಣ್ಣೆಯನ್ನು ಖರೀದಿಸುತ್ತಾ ಹೆಸರು ಮಾಡತೊಡಗಿದ. ಹಳೆಯ ಕೆಂಪಗಿನ ಸಾಂತಾ ಸೂಟ್ ಧರಿಸಿದ್ದ ಕಾನ್, ಅಲ್ಲಲ್ಲಿ ಅಲೆದಾಡುತ್ತಿದ್ದಾಗ ಪುಟಾಣಿಗಳೆಲ್ಲರ ಮನ ಗೆದ್ದು, ಸಾಂತಾ ಕ್ಲಾಸ್‌ನಂತಹ ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡ.

1952ರಲ್ಲಿ, ಫೇರ್‌ಬ್ಯಾಂಕ್ಸ್‌ನಿಂದ 13 ಮೈಲಿ ದಕ್ಷಿಣಭಾಗದಲ್ಲಿ ವ್ಯಾಪಾರ ಕೇಂದ್ರವೊಂದನ್ನು ತೆರೆಯಲು ಮಿಲ್ಲರ್ ನಿರ್ಧರಿಸಿದ. ಅದುವೇ ಈಗ "ನಾರ್ತ್ ಪೋಲ್" (ಉತ್ತರ ಧ್ರುವ) ಎಂದು ಕರೆಯಲಾಗುವ ಪ್ರದೇಶ. ಒಂದುದಿನ, ಹೊಸ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಕಾನ್‌ನನ್ನು ಗುರುತಿಸಿಬಿಟ್ಟ. ತಕ್ಷಣವೇ ಆತನ ಬಳಿ ಸಮೀಪಿಸಿ, "ಹಲೋ ಸಾಂತಾ ಕ್ಲಾಸ್! ನೀನು ಹೊಸ ಮನೆ ಕಟ್ಟುತ್ತಿರುವೆಯಾ?" ಎಂದು ಪ್ರಶ್ನಿಸಿದ. ಇದುವೇ ಪ್ರೇರಣೆಯಾಯಿತು. ಅಲ್ಲಿನ ಹೊಸ ಮಳಿಗೆಗೆ "ಸಾಂತಾ ಕ್ಲಾಸ್ ಹೌಸ್" ಎಂದೇ ನಾಮಕರಣ ಮಾಡಲಾಯಿತು!

1952ರಿಂದೀಚೆಗೆ, ಸಾಂತಾಕ್ಲಾಸ್ ಹೌಸ್ ಮತ್ತು ಮಿಲ್ಲರ್ ಕುಟುಂಬದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಾಂತಾ ಕ್ಲಾಸ್ ಹೌಸ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶ್ವಾದ್ಯಂತ ಹಲವಾರು ಲೇಖಕರು, ಪತ್ರಿಕೆಗಳು ಇದಕ್ಕೆ ಪ್ರಚಾರ ನೀಡಿವೆ. ಮಿಲ್ಲರ್ ಕುಟುಂಬದ ಸಂಪ್ರದಾಯ ಹಳೆಯ ಕನಸುಗಳ ಮೇಲೆ, ಭವಿಷ್ಯದ ಮುನ್ನೋಟದೊಂದಿಗೆ ಹಾಗೆಯೇ ಸಾಗುತ್ತಿದೆ.

ಪ್ರತಿ ವರ್ಷ ಸಾಂತಾ ಕ್ಲಾಸ್ ಹೌಸ್‌ಗೆ ಭೇಟಿ ನೀಡುತ್ತಿರುವ ಸಾವಿರಾರು ಮಂದಿಯಲ್ಲಿ ನೀವೂ ಒಬ್ಬರಾಗಿದ್ದರೆ, ಅಲ್ಲಿ ನೀವು ಮಿಲ್ಲರ್ ಕುಟುಂಬದ ಚಟುವಟಿಕೆಗಳನ್ನು ನೋಡಲೇಬೇಕು. ಅವರು ತಮ್ಮ ನಿರಂತರ ಕರ್ತವ್ಯವವನ್ನು ಮುಂದುವರಿಸುತ್ತಲೇ ಇರುತ್ತಾರೆ. ವಿಶ್ವಾದ್ಯಂತ ಇರುವ ಪುಟಾಣಿಗಳಿಗೆ ಪತ್ರಗಳನ್ನು ಕಳುಹಿಸುವುದರಿಂದ ಹಿಡಿದು, ಸಾಂತಾ ಕ್ಲಾಸ್ ಹೌಸ್‌ಗೆ ಬರುವವರನ್ನು "ಮೆರ್ರಿ ಕ್ರಿಸ್ಮಸ್" ಶುಭ ಆಶಯದೊಂದಿಗೆ ಸ್ವಾಗತಿಸುತ್ತಿರುತ್ತಾರವರು.

ಸಾಂತಾ ಕ್ಲಾಸ್ ಮತ್ತು ಮಿಲ್ಲರ್ ಕುಟುಂಬ ಬಗ್ಗೆ ಪ್ರಚಲಿತವಿರುವ ರಂಜನೀಯ ಸಂಗತಿಗಳು :
webdunia
PTI
* 1974ರಲ್ಲಿ, ರಿಚರ್ಡ್ಸನ್ ಹೆದ್ದಾರಿಯ ರಚನೆಗಾಗಿ ಸಾಂತಾ ಕ್ಲಾಸ್ ಹೌಸ್ ಅನ್ನು ತೆರವುಗೊಳಿಸಿ, ಹೊಸ ಮಳಿಗೆಯನ್ನು ಸೈಂಟ್ ನಿಕೊಲಸ್ ಡ್ರೈವ್‌ನಲ್ಲಿ ನಿರ್ಮಿಸಲಾಯಿತು. ಹೊಸ ಮಳಿಗೆಯನ್ನು 1978ರಲ್ಲಿ ಅದನ್ನು ಈಗಿನ 10 ಸಾವಿರ ಚದರಡಿ ವಿಸ್ತೀರ್ಣಕ್ಕೆ ವಿಸ್ತರಿಸಲಾಯಿತು.

* ಸಾಂತಾ ಕ್ಲಾಸ್ ಹೌಸ್ ಉತ್ತರ ಧ್ರುವದ ಮೊದಲ ಅಂಚೆ ಕಚೇರಿಯಾಗಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿತ್ತು.

webdunia
PTI
* ಕಾನ್ ಮಿಲ್ಲರ್ ಅವರು ಉತ್ತರ ಧ್ರುವದಲ್ಲಿ ಅತಿ ದೀರ್ಘಕಾಲ (19 ವರ್ಷ) ಸೇವೆ ಸಲ್ಲಿಸಿದ ಮೇಯರ್ ಆಗಿ ಹೆಸರು ಪಡೆದರು.

* ನೀಲೀ ಮಿಲ್ಲರ್ ಅವರು ಸಾಂತಾ ಕ್ಲಾಸ್ ಹೌಸ್‌ನಲ್ಲಿ ವೈವಾಹಿಕ ಆಯುಕ್ತರಾಗಿ, ಸಾವಿರಾರು ದಂಪತಿಗಳ ವಿವಾಹ ನೆರವೇರಿಸಿ ಹೆಸರು ಗಳಿಸಿದ್ದಾರೆ.

* ಕಾನ್ ಮತ್ತು ನೀಲೀ ದಂಪತಿಯ ಪುತ್ರರಾದ ಮೈಕ್ ಮಿಲ್ಲರ್ ಮತ್ತು ದಿವಂಗತ ಟೆರಿ ಮಿಲ್ಲರ್ ಅವರು ಅಮೆರಿಕದ ಇತಿಹಾಸದಲ್ಲಿ ಒಂದೇ ರಾಜ್ಯದ ಸೆನೆಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಏಕೈಕ ಸಹೋದರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Share this Story:

Follow Webdunia kannada