ಅಗ್ರ ಶ್ರೇಯಾಂಕಿತ ಜೋಡಿ ಮಹೇಶ್ ಭೂಪತಿ ಮತ್ತು ಮಾರ್ಕ್ ನೋವ್ಲ್ಸ್ ಚೆನ್ನೈ ಓಪನ್‌ನ ಡಬಲ್ಸ್ ವಿಭಾಗದಿಂದ ಹೊರ ಬಿದ್ದಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳಾದ ಸ್ವಿಟ್ಜರ್ಲ್ಯಾಂಡಿನ ಜೀನ್ ಕ್ಲೌಡ್ ಸ್ಚೆರರ್ ಮತ್ತು ಸ್ಟಾನಿಸ್ಲಾಸ್ ವಾರ್ವಿಂಕಾರೆದುರು ಕ್ವಾರ್ಟರ್ ಫೈನಲಿನಲ್ಲಿ ಇವರು ಸೋಲೊಪ್ಪಿಕೊಂಡರು.
ಶುಕ್ರವಾರ ನಡೆದ ಈ ಅಂತಿಮ ಎಂಟರ ಘಟ್ಟದ ಓಪನ್ ಟೂರ್ನಮೆಂಟಿನ ಪಂದ್ಯದಲ್ಲಿ ಭೂಪತಿ-ನೋವ್ಲ್ಸ್ ಜೋಡಿ 6-3, 3-6, 8-10ರಿಂದ ಪರಾಜಯಗೊಂಡು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಈ ಬಹಾಮಿಯನ್-ಇಂಡಿಯನ್ ಜತೆಗಾರರು ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದರಾದರೂ ಎರಡು ಮತ್ತು ಮೂರನೇ ಸುತ್ತಿನಲ್ಲಿನ ನೀರಸ ಪ್ರದರ್ಶನದಿಂದ ಸೋಲು ಇವರ ಪಾಲಾಗಿದೆ.
ಈ ಹಿಂದಿನ ಸುತ್ತುಗಳಲ್ಲಿ ಯೂಕಿ ಭಾಂಬ್ರಿ- ಹರ್ಷ ಮಂಕಡ್, ರೋಹಣ್ ಬೋಪಣ್ಣ-ಫ್ಲಾವಿಯೋ ಸಿಪೋಲಾ, ಲಿಯಾಂಡರ್ ಪೇಸ್- ಲುಕಾಸ್ ದ್ಲೋಹಿ, ಸೋಮದೇವ್ ದೇವರ್‌ಮನ್- ಪ್ರಕಾಶ್ ಅಮೃತರಾಜ್ ಜೋಡಿಗಳು ನಿರ್ಗಮಿಸಿದ್ದರು. ಉಳಿದಿದ್ದ ಏಕೈಕ ಭಾರತೀಯ ಆಟಗಾರ ಮಹೇಶ್ ಭೂಪತಿ ಕೂಡ ಇದೀಗ ಹೊರ ಬಿದ್ದಿದ್ದು, ಆ ಮೂಲಕ ಡಬಲ್ಸ್ ವಿಭಾಗದಲ್ಲಿ ಭಾರತೀಯರ ಹೋರಾಟ ಮುಗಿದಂತಾಗಿದೆ.
ಭೂಪತಿ ಜೋಡಿ ಈ ಹಿಂದಿನ ಸುತ್ತಿನಲ್ಲಿ ಸೋಮದೇವ್ ದೇವರ್‌ಮನ್ ಮತ್ತು ಪ್ರಕಾಶ್ ಅಮೃತರಾಜ್‌ರನ್ನು 7-6(3), 7-6(8)ರಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.