ಸಂಘಟಿತ ಹೋರಾಟ ಪ್ರದರ್ಶಿಸಿದ ಭಾರತೀಯ ಬೌಲರುಗಳ ನೆರವಿನಿಂದ ಇಲ್ಲಿನ ಕಿಂಗ್ಸ್‌ಮೆಡ್ ಮೈದಾನದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಭಾರತ 87 ರನ್ನುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 1-1ರಲ್ಲಿ ಸಮಗೊಳಿಸಿದೆ.
ಆ ಮೂಲಕ ಡರ್ಬನ್‌ನಲ್ಲಿ ದರ್ಬಾರ್ ನಡೆಸಿರುವ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ. ಇಲ್ಲಿನ ಕಿಂಗ್ಸ್‌ಮೆಡ್ ಮೈದಾನದಲ್ಲಿ ಭಾರತ ದಾಖಲಿಸಿರುವ ಚೊಚ್ಚಲ ಜಯ ಇದಾಗಿದೆ. ವಿಶ್ವ ಕ್ರಿಕೆಟ್‌ನಲ್ಲೇ ಭಾರಿ ಕುತೂಹಲ ಮೂಡಿಸಿರುವ ಎರಡು ಅಗ್ರ ತಂಡಗಳ ಹೋರಾಟವು ಇದೀಗ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ನಲ್ಲಿ ಫಲಿತಾಂಶ ನಿರ್ಧಾರವಾಗಲಿದೆ.
ಪಂದ್ಯಶ್ರೇಷ್ಠ: ವಿವಿಎಸ್ ಲಕ್ಷ್ಮಣ್
ಗೆಲುವಿಗಾಗಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 303 ರನ್ನುಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಗ್ರೇಮ್ ಸ್ಮಿತ್ ಪಡೆ 215 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಳ್ಳುವ ಮೂಲಕ ಮುಖಭಂಗಕ್ಕೊಳಗಾಯಿತು. 112
/3 ಎಂಬಲ್ಲಿದ್ದ ನಾಲ್ಕನೇ ದಿನದಾಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಗೆಲುವಿಗೆ 192 ರನ್ನುಗಳ ಅಗತ್ಯವಿತ್ತು. ಆದರೆ ಚುರುಕಿನ ದಾಳಿ ಸಂಘಟಿಸಿದ ಭಾರತೀಯ ಬೌಲರುಗಳನ್ನು ಆತಿಥೇಯರನ್ನು ಬೇಗನೆ ಕಟ್ಟಿ ಹಾಕುವ ಮೂಲಕ ಐತಿಹಾಸಿಕ ಜಯ ದಾಖಲಿಸಿದರು. ಆರಂಭದಲ್ಲೇ ಅಪಾಯಕಾರಿ ಜಾಕ್ವಾಸ್ ಕಾಲಿಸ್‌ರನ್ನು (17) ಪೆವಿಲಿಯನ್‌ಗೆ ಮರಳಿಸಿರುವ ಶ್ರೀಶಾಂತ್ ಮುನ್ನಡೆ ಒದಗಿಸಿಕೊಟ್ಟರು. ಇದಾದ ಬೆನ್ನಲ್ಲೇ ಅಬ್ರಹಾಂ ಡಿ ವಿಲಿಯರ್ಸ್ (33) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾರ್ಕ್ ಬೌಷರ್ (1) ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ನಂತರ ಬಂದ ಡೇಲ್ ಸ್ಟೈನ್ (10), ಪಾಲ್ ಹ್ಯಾರಿಸ್ (7), ಮೊರ್ನೆ ಮೊರ್ಕೆಲ್ (20) ಮತ್ತು ತ್ಸೊತ್ಸೊಬೆ (0) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.ಆದರೆ ಮತ್ತೊಂದು ಬದಿಯಿಂದ ಏಕಾಂಕಿ ಹೋರಾಟ ನಡೆಸಿದ ಆಶ್ವೆಲ್ ಪ್ರಿನ್ಸ್ 39 ರನ್ ಗಳಿಸಿ ಅಜೇಯರಾಗುಳಿದರು. ಘಾತಕ ದಾಳಿ ಸಂಘಟಿಸಿದ ಶ್ರೀಶಾಂತ್, ಹರಭಜನ್ ಮತ್ತು ಜಹೀರ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀ ಮತ್ತು ಜಹೀರ್ ತಲಾ ಮೂರು ಮತ್ತು ಭಜ್ಜಿ ಎರಡು ವಿಕೆಟ್ ಕಿತ್ತು ಮಿಂಚಿದರು. ಈ ಗೆಲುವಿನೊಂದಿಗೆ ಮಹಿ ಬಳಗ ಟೆಸ್ಟ್‌ನಲ್ಲಿ ತಮ್ಮ ಅಗ್ರಪಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಇದೀಗ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲೂ ಗೆಲುವು ದಾಖಲಿಸಲು ಯಶಸ್ವಿಯಾದಲ್ಲಿ ಹರಿಣಗಳ ನಾಡಿನಲ್ಲಿ ಐತಿಹಾಸಿಕ ಸರಣಿ ಜಯ ದಾಖಲಿಸಲಿದೆ. ತೀವ್ರ ಒತ್ತಡದ ಪರಿಸ್ಥಿತಿಯಲ್ಲಿಯೂ ತಂಡಕ್ಕೆ ಮತ್ತೊಮ್ಮೆ ಆಪದ್ಭಾಂಧವನಾಗಿದ್ದ ವೆರಿ ವೆರಿ ಸ್ಪಷಲ್ ವಿವಿಎಸ್ ಲಕ್ಷ್ಮಣ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೇವಲ ನಾಲ್ಕು ರನ್ನುಗಳಿಂದ ಶತಕ ಕಳೆದುಕೊಂಡಿದ್ದ ಲಕ್ಷ್ಮಣ್, ಕೆಳ ಕ್ರಮಾಂಕದ ಜಹೀರ್ ಖಾನ್ ಜತೆ ಸೇರಿ ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾಗಿದ್ದರು. ಈ ಹಿಂದೆಯೂ ಹಲವು ಬಾರಿ ತಂಡದ ಆಪತ್ತಿನ ಪರಿಸ್ಥಿತಿಯಲ್ಲಿ ನೆರವಾಗಿದ್ದ ಲಕ್ಷ್ಮಣ್ ಡರ್ಬನ್‌ನ ಕಿಂಗ್ಸ್‌ಮೆಡ್ ಮೈದಾನದಲ್ಲೂ ತಮ್ಮ ಸಾಮರ್ಥ್ಯ ನಿರೂಪಿಸಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಪಂದ್ಯ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಕ್ಷ್ಮಣ್, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲೂ ಇಶಾಂತ್ ಶರ್ಮಾ ಜತೆ ಸೇರಿ ತಂಡಕ್ಕೆ ಗೆಲುವು ಒದಗಿಸಿಕೊಟ್ಟಿದ್ದರು. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ