Miscellaneous Independence Article 0808 14 1080814048_1.htm

Select Your Language

Notifications

webdunia
webdunia
webdunia
webdunia

ಭಯ-ಆತಂಕಗಳ ನಡುವೆ 'ಸ್ವಾತಂತ್ರ್ಯ' ಸಂಭ್ರಮ!

ಭಯೋತ್ಪಾದನೆ
PTI
ಸ್ವತಂತ್ರ ಭಾರತ 61ರ ಸ್ವಾತಂತ್ರ್ಯೋತ್ಸವದ ಗುಂಗಿನಲ್ಲಿದ್ದರೆ, ದೇಶದ ಮಹಾನಗರ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳ, ದೇವಾಲಯಗಳ ಪರಿಸರದಲ್ಲಿ ಆತಂಕದ ಛಾಯೆ ಮಡುಗಟ್ಟಿದೆ. ಆಂಧ್ರಪ್ರದೇಶದ ತಿರುಪತಿ, ಕಾಶಿ ವಿಶ್ವನಾಥ ದೇವಾಲಯ, ತಮಿಳುನಾಡಿನ ಮಧುರೈ ಮೀನಾಕ್ಷಿ, ತಾಜ್ ಮಹಲ್, ಕುತುಬ್ ಮೀನಾರ್ ಒಂದೇ ಎರಡೇ... ಎಲ್ಲೆಡೆ ಭಯ ಮಿಶ್ರಿತ ವಾತಾವರಣ ತುಂಬಿಕೊಂಡಿದೆ!

ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಾದರೂ ಸ್ವತಂತ್ರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂತಸವನ್ನು ಹಂಚಿಕೊಳ್ಳೋಣ, ಇಲ್ಲವೇ ದೇವಾಲಯಕ್ಕೆ ಹೋಗಿ ಹರಕೆ ಸಲ್ಲಿಸಿ ಬರೋಣ ಎಂದುಕೊಂಡಿದ್ದರೆ, ಭಯೋತ್ಪಾದನೆ, ಬಾಂಬ್ ಸ್ಫೋಟದ ಭಯ ಎಲ್ಲರನ್ನೂ ಆತಂಕದ ಮಡಿಲಿಗೆ ದೂಡಿರುವುದು ಸ್ವತಂತ್ರ ಭಾರತದ ದುರಂತವಲ್ಲದೆ ಇನ್ನೇನು?

ಇಂದು ಯಾವುದೇ ಜನನಿಬಿಡ ಪ್ರದೇಶ, ಪಾರ್ಕ್, ಬೀಚ್ ಪ್ರದೇಶಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮುಕ್ತವಾಗಿ ಓಡಾಡದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ ಇಲ್ಲೆಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ಅಲ್ಲಿಯೂ ಉಸಿರು ಗಟ್ಟಿಯಾಗಿ ಬಿಡುವಂತಿಲ್ಲ, ದೊಡ್ಡ ಬ್ಯಾಗ್ ಒಯ್ಯುವಂತಿಲ್ಲ, ಅನುಮಾನ ಬಂದರೆ ಮತ್ತಷ್ಟು ಗೋಳು... ಹೀಗೆ ಒಂದರ್ಥದಲ್ಲಿ ಭಯದ ನೆರಳಲ್ಲೇ ಓಡಾಡಬೇಕಾದ ಸ್ಥಿತಿ ಬಂದೊದಗಿದೆ.

ಬಡತನ, ಅನಕ್ಷರತೆ, ಶೌಚಾಲಯ ಸಮಸ್ಯೆಗಳ ಜೊತೆ, ಜೊತೆಗೆ ಭಯೋತ್ಪಾದನೆ ಇಂದು ಜಗತ್ತಿನಾದ್ಯಂತ ಪ್ರಬಲವಾಗಿ ತಳವೂರುತ್ತಿದ್ದರೆ, ಅದರಲ್ಲಿ ಭಾರತವೂ ಸೇರ್ಪಡೆಗೊಂಡಿದೆ. ಇತ್ತೀಚೆಗಷ್ಟೇ ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎಲ್ಲೆಡೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ.

ಜೈಲಿನೊಳಗಡೆ ಇದ್ದ ಕೈದಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಮಾರಂಭದಲ್ಲಿ ಪಾಲ್ಗೊಳ್ಳಬಹುದೇ ವಿನಃ ಅವರನ್ನು ಬಂಧಮುಕ್ತಗೊಳಿಸುವುದಿಲ್ಲ, ಇದೀಗ ಸ್ವತಂತ್ರ ಭಾರತೀಯರ ಸ್ಥಿತಿಯೂ ಹಾಗೇ ಆಗಿದೆ .ಸ್ವಾತಂತ್ರ್ಯ ಬಂದು ಆರು ದಶಕಗಳೇ ಸಂದರೂ ಇದೊಂದು ಬಂಧನದ ಸ್ವಾತಂತ್ರ್ಯವಾಗಿದೆ.

ಅಂದು ಪ್ರತಿಯೊಬ್ಬರ ಧಮನಿಧಮನಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿಕೊಂಡು ಬ್ರಿಟಿಷರ ಕಬಂಧಬಾಹುಗಳಿಂದ ದೇಶವನ್ನು ಸ್ವತಂತ್ರಗೊಳಿಸಲು ಮಾಡಿದ ತ್ಯಾಗ-ಬಲಿದಾನ ಅಮೋಘವಾದದ್ದು. ಆದರೆ ಇಂದು ಜೆಹಾದ್, ಕ್ರುಸೇಡ್‌ಗಳ ಹೆಸರಲ್ಲಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುವ ಕಾರ್ಯ ಹೆಚ್ಚಾಗುತ್ತಿದೆ.

ಧರ್ಮಾಂಧತೆ, ಮತಾಂಧತೆಯ ಕಪಿಮುಷ್ಠಿಗೆ ಸಿಲುಕಿದ ಸಾವಿರಾರು ಮಂದಿಗೆ ಅದೇ ಒಂದು ಪ್ರಪಂಚವಾಗಿದ್ದು, ತಮ್ಮದೇ ಪ್ರಪಂಚದ ಸೃಷ್ಟಿಗಾಗಿ ನಡೆಸುತ್ತಿರುವ ಹೋರಾಟ ದೇಶದ ಸಾಮರಸ್ಯ,ಭಾವೈಕ್ಯತೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಾಗಿರುವುದು ಭಾರತದ ಪ್ರಗತಿಗೆ ತಗುಲಿಕೊಂಡ ಪಿಡುಗಾಗಿ ಪರಿಣಮಿಸಿದೆ. ಭಯಮುಕ್ತ ಸಮಾಜದೊಂದಿಗೆ ಸ್ವಾತಂತ್ರ್ಯ ಆಚರಿಸುವಂತಾಗಲಿ....

Share this Story:

Follow Webdunia kannada