ಸ್ಪ್ರಿಂಟಿಂಗ್ ದೊರೆ ಮತ್ತು ಅತೀ ದೊಡ್ಡ ಜಾಗತಿಕ ಸ್ಟಾರ್ ಜಮೈಕಾದ ಉಸೇನ್ ಬೋಲ್ಟ್ ತಮ್ಮ ತೋರುಬೆರಳನ್ನು ಮೇಲೆತ್ತಿ ತಾವು ನಂಬರ್ ಒನ್ ಎಂದು ಭಾನುವಾರ ರಾತ್ರಿ ಆಟಗಾರರನ್ನು ಪರಿಚಯಿಸುವ ಸಂದರ್ಭದಲ್ಲಿ ಇಂಗಿತ ನೀಡಿದ್ದರು.
ಆಗ ನೆರೆದಿದ್ದ ಗುಂಪಿನಿಂದ ಉಸೇನ್, ಉಸೇನ್ ಎಂಬ ಮಾರ್ದನಿ ಹೊರಬಿದ್ದಿತ್ತು. ಬಳಿಕ ಬೋಲ್ಟ್ ಪುನಃ 100 ಮೀಟರ್ ಓಟವನ್ನು 9.81 ಸೆಕೆಂಡುಗಳಲ್ಲಿ ಓಡಿ ಚಿನ್ನದ ಪದಕ ವಿಜೇತರಾಗಿ ಸರ್ವಕಾಲಿಕ ಮಹಾನ್ ಸ್ಪ್ರಿಂಟರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಪುರುಷರಾಗಲಿ, ಮಹಿಳೆಯರಾಗಲಿ 100 ಮೀಟರ್ ಒಲಿಂಪಿಕ್ ಓಟದಲ್ಲಿ ಮೂರು ಬಾರಿ ಗೆದ್ದಿರುವ ಏಕಮಾತ್ರ ಕ್ರೀಡಾಪಟು ಉಸೇನ್ ಬೋಲ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸತತ ಮೂರು ಕ್ರೀಡೆಗಳಲ್ಲಿ ಈ ಸಾಧನೆ ಮಾಡಿದರು.
ಅವರ ಮುಖ್ಯ ಎದುರಾಳಿ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ 2004ರ ಒಲಿಂಪಿಕ್ ಚಾಂಪಿಯನ್ ಆಗಿದ್ದು, ಬಳಿಕ ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಅಮಾನತು ಶಿಕ್ಷೆಯನ್ನು ಅನುಭವಿಸಿದ್ದು, ಈಗ 9.89 ಸೆಕೆಂಡುಗಳಲ್ಲಿ ಓಡಿ ಬೆಳ್ಳಿಪದಕ ವಿಜೇತರಾಗಿದ್ದಾರೆ.
ಕೆನಡಾದ ಆಂಡ್ರೆ ಡಿ ಗ್ರಾಸ್ 9.91 ಸೆಕೆಂಡುಗಳಲ್ಲಿ ಓಡಿ ಕಂಚಿನ ಪದಕ ವಿಜೇತರಾಗಿದ್ದಾರೆ. ಅಂತಿಮ 40 ಮೀಟರುಗಳಲ್ಲಿ ಬೋಲ್ಟ್ ಗ್ಯಾಟ್ಲಿನ್ ಅವರನ್ನು ಹಿಂದಿಕ್ಕಿ ಗುರಿಮುಟ್ಟಿದಾಗ ಅವರು ಎದೆಯನ್ನು ಬಡಿದುಕೊಂಡು ಗುಂಪಿಗೆ ಗಾಳಿಯಲ್ಲೇ ಮುತ್ತುಗಳನ್ನು ನೀಡಿದರು. ಕೆಲವು ಪ್ರೇಕ್ಷಕರನ್ನು ಆಲಂಗಿಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ