Publish Date: Sat, 01 Aug 2026 (15:50 IST)
Updated Date: Sat, 01 Aug 2026 (15:51 IST)
ಗ್ಲಾಸ್ಗೊ: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ ಅವಳಿ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಭಾರತದ ಸೂಪರ್ ಸ್ಟಾರ್ ಜಾವೆಲಿನ್ ಥ್ರೋಪಟು, ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಅವರು ಶನಿವಾರ ತಡರಾತ್ರಿ ನಡೆದ ಜಾವೆಲಿನ್ ಥ್ರೊ ಫೈನಲ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಯಶ್‌ವೀರ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಭಾರತಕ್ಕೆ ಒಂದೇ ಸ್ಪರ್ಧೆಯಲ್ಲಿ ಎರಡು ಪದಕ ಲಭಿಸಿದೆ.
ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ 28 ವರ್ಷದ ನೀರಜ್ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 85.83 ಮೀಟರ್ ಥ್ರೊ ಮಾಡಿ ಎರಡನೇ ಸ್ಥಾನಕ್ಕೆ ಗಳಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿರುವ ಯುವ ಅಥ್ಲೀಟ್ 24 ವರ್ಷದ ಯಶ್‌ವೀರ್ ಸಿಂಗ್ ತಮ್ಮ ಆರನೇ ಹಾಗೂ ಅಂತಿಮ ಯತ್ನದಲ್ಲಿ 85.83 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದಾರೆ. ಶ್ರೀಲಂಕಾ ರುಮೇಶ್ ತರಂಗ ಪಥಿರಗೆ ತಮ್ಮ ಪ್ರಯತ್ನದಲ್ಲಿ 89.75 ಮೀ. ಥ್ರೊ ಮಾಡಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.
ನೀರಜ್ ಚೋಪ್ರಾ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಈಚೆಗೆ ಚೇತರಿಸಿಕೊಂಡು ಕಣಕ್ಕಿಳಿದಿದ್ದರು. ಗಾಯದ ಕಾರಣಕ್ಕೆ ಡೈಮಂಡ್ ಲೀಗ್ ಸ್ಪರ್ಧೆಯಿಂದಲೂ ಹೊರಗುಳಿದಿದ್ದರು. 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ನೀರಜ್‌ಗೆ ಇದು ಎರಡನೇ ಕಾಮನ್‌ವೆಲ್ತ್ ಕೂಟವಾಗಿತ್ತು. ಕಣದಲ್ಲಿದ್ದ ಭಾರತದ ಮೂರನೇ ಸ್ಪರ್ಧಿ ರೋಹಿತ್ ಯಾದವ್ 81.56 ಮೀಟರ್ ಎಸೆದು ಏಳನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ