Publish Date: Sun, 12 Jul 2026 (11:54 IST)
Updated Date: Sun, 12 Jul 2026 (11:57 IST)
ಕಾನ್ಸಾಸ್ ಸಿಟಿ: ಲಯೊನೆಲ್ ಮೆಸ್ಸಿ ನಾಯಕತ್ವದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ.
ಇಲ್ಲಿ ಇಂದು ಬೆಳಿಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಹೆಚ್ಚುವರಿ ಸಮಯದಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಗೆಲುವಿನ ಬೆನ್ನಲ್ಲೇ ಅರ್ಜೆಂಟೀನಾ ತಂಡದ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ.
ಪಂದ್ಯದ 10ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರು ಗೋಲು ಗಳಿಸುವ ಆರಂಭಿಕ ಮುನ್ನಡೆ ಒದಗಿಸಿದರು. ಪಂದ್ಯದ 67ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್ ತಂಡದ ಡ್ಯಾನ್ ಎನ್‌ಡೋಯ್ ಗೋಲು ದಾಖಲಿಸಿ, ಸಮಬಲ ಸಾಧಿಸಲು ನೆರವಾದರು.
ಇದಾದ ಕೆಲವೇ ನಿಮಿಷಗಳಲ್ಲಿ ಪಂದ್ಯದಲ್ಲಿ ಎರಡು ಬಾರಿ ಹಳದಿ ಕಾರ್ಡ್ ಪಡೆದ ಸ್ವಿಟ್ಜರ್ಲೆಂಡ್ ತಂಡದ ಬ್ರೀಲ್ ಎಂಬೊಲೊ ಅವರು ಮೈದಾನದಿಂದ ಹೊರನಡೆಯಬೇಕಾಯಿತು.
ಈ ಹಂತದಲ್ಲಿ ಸ್ವಿಟ್ಜರ್ಲೆಂಡ್ ತಂಡವು ಹಿನ್ನಡೆ ಅನುಭವಿಸಿತು. ಅಲ್ಲಿಂದ 10 ಆಟಗಾರರ ಜೊತೆ ಆಡಿದ ಸ್ವಿಜ್ ಪೂರ್ಣಾವಧಿ ಮುಗಿಯುವ ವೇಳೆಗೆ ಅರ್ಜೆಂಟೀನಾ ತಂಡಕ್ಕೆ ಯಾವುದೇ ಹೆಚ್ಚುವರಿ ಗೋಲು ದಾಖಲಿಸಲು ಬಿಡಲಿಲ್ಲ.
ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿ, ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಸಮಯ ನೀಡಲಾಯಿತು. ಈ ಹಂತದಲ್ಲಿ ಅರ್ಜೆಂಟೀನಾ ಪರ 112ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಜ್ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು.
ಅಂತಿಮ ಹಂತದಲ್ಲಿ ಲೌಟಾರೊ ಮಾರ್ಟಿನೆಜ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 3–1ರ ಅಂತರದಲ್ಲಿ ಗೆಲುವು ಸಾಧಿಸಲು ನೆರವಾದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ