Publish Date: Mon, 20 Jul 2026 (09:09 IST)
Updated Date: Mon, 20 Jul 2026 (09:13 IST)
ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ನಿಗದಿತ 90 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗದ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ತಲುಪಿತು. ಅಲ್ಲಿ ಸ್ಪೇನ್‌ನ ಬದಲಿ ಆಟಗಾರ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್‌ಗೆ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ತಂದುಕೊಟ್ಟಿತು.
ಸ್ಪೇನ್ ಮೇಲಾಟ: ಪಂದ್ಯದ ಆರಂಭದಿಂದಲೂ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರ ಮಾರ್ಗದರ್ಶನದ ಸ್ಪೇನ್ ತಂಡ ಚೆಂಡಿನ ಮೇಲಿನ ನಿಯಂತ್ರಣವನ್ನು ಸಾಧಿಸಿತ್ತು. ಅರ್ಜೆಂಟೀನಾ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು.
ಅರ್ಜೆಂಟೀನಾಗೆ ರೆಡ್ ಕಾರ್ಡ್ ಆಘಾತ: ಪಂದ್ಯದ 93ನೇ ನಿಮಿಷದಲ್ಲಿ ಅರ್ಜೆಂಟೀನಾದ ಸ್ಟಾರ್ ಮಿಡ್‌ಫೀಲ್ಡರ್ ಎಂಝೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ (ರೆಡ್ ಕಾರ್ಡ್) ಪಡೆದು ಮೈದಾನದಿಂದ ಹೊರನಡೆದರು. ಇದರಿಂದಾಗಿ ಅರ್ಜೆಂಟೀನಾ ಪಂದ್ಯದ ಕೊನೆಯ ಹಂತದಲ್ಲಿ 10 ಆಟಗಾರರೊಂದಿಗೆ ಹೋರಾಡಬೇಕಾಯಿತು.
ಮ್ಯಾಜಿಕ್ ಕ್ಷಣ: 106ನೇ ನಿಮಿಷದಲ್ಲಿ ಲಮೈನ್ ಯಮಲ್ ಮತ್ತು ಪೆಡ್ರೊ ಪೋರ್ವೊ ಅವರ ಅದ್ಭುತ ಪಾಸ್ ನೆರವಿನಿಂದ ನಿಕೊ ವಿಲಿಯಮ್ಸ್ ಚೆಂಡನ್ನು ಹೆಡ್ ಮಾಡಿದರು. ಅದನ್ನು ಅತ್ಯಂತ ಚಾಣಾಕ್ಷತನದಿಂದ ಸ್ವೀಕರಿಸಿದ ಫೆರಾನ್ ಟೊರೆಸ್, ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರನ್ನು ವಂಚಿಸಿ ಗೋಲು ಪೆಟ್ಟಿಗೆಗೆ ಸೇರಿಸಿದರು.
ಲಿಯೋನೆಲ್ ಮೆಸ್ಸಿಗೆ ನಿರಾಸೆ, ಸ್ಪೇನ್‌ಗೆ ಡಬಲ್ ಧಮಾಕಾ
ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯ ಇದಾಗಿದ್ದು, ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಅವರ ಕನಸು ಭಗ್ನಗೊಂಡಿತು.
ಮತ್ತೊಂದೆಡೆ, ಸ್ಪೇನ್ ತಂಡವು ಮತ್ತೊಮ್ಮೆ ಫುಟ್‌ಬಾಲ್ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಎರಡು ವರ್ಷಗಳ ಹಿಂದೆ ಯೂರೋ ಕಪ್ (Euro 2024) ಗೆದ್ದಿದ್ದ ಸ್ಪೇನ್, ಈಗ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಸತತ ಎರಡು ಪ್ರಮುಖ ಕಾಂಟಿನೆಂಟಲ್ ಮತ್ತು ಜಾಗತಿಕ ಟ್ರೋಫಿಗಳನ್ನು ಗೆದ್ದ ವಿಶಿಷ್ಟ ದಾಖಲೆಯನ್ನು ಎರಡನೇ ಬಾರಿಗೆ ತನ್ನದಾಗಿಸಿಕೊಂಡಿದೆ. ಅಲ್ಲದೆ ಚಾಂಪಿಯನ್ ಸ್ಪೇನ್ ತಂಡಕ್ಕೆ ಫಿಫಾದಿಂದ ಭಾರಿ ಮೊತ್ತದ $50 ಮಿಲಿಯನ್ ಬಹುಮಾನ ಲಭಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ