Publish Date: Mon, 06 Jul 2026 (10:13 IST)
Updated Date: Mon, 06 Jul 2026 (10:20 IST)
ಫಿಫಾ ವಿಶ್ವಕಪ್ 2026 ರ ನಾಕೌಟ್ ಹಂತದಲ್ಲಿ ಭಾರಿ ದೊಡ್ಡ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಭಾನುವಾರ ತಡರಾತ್ರಿ ನಡೆದ ರೋಮಾಂಚಕಾರಿ 'ರೌಂಡ್ ಆಫ್ 16' ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ನಾರ್ವೆ 2-1 ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್‌ನಿಂದ ಹೊರದಬ್ಬಿದೆ. ಈ ಮೂಲಕ ಬ್ರೆಜಿಲ್‌ನ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.
ಈ ಹೃದಯವಿದ್ರಾವಕ ಸೋಲಿನ ಬೆನ್ನಲ್ಲೇ ಬ್ರೆಜಿಲ್‌ನ ದಿಗ್ಗಜ ಆಟಗಾರ ನೇಮಾರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ.
ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ನೇಮಾರ್ಪಂದ್ಯ ಮುಗಿದ ತಕ್ಷಣದ ದೃಶ್ಯಗಳು ಜಾಗತಿಕ ಫುಟ್‌ಬಾಲ್ ಅಭಿಮಾನಿಗಳ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದೆ. ನಾರ್ವೆ ವಿರುದ್ಧದ ಸೋಲಿನ ಅಂತಿಮ ವಿಸ್ಲ್ ಮೊಳಗುತ್ತಿದ್ದಂತೆ 34 ವರ್ಷದ ನೇಮಾರ್ ಮೈದಾನದಲ್ಲೇ ಮೊಣಕಾಲುದ್ದ ಕುಳಿತು ಪ್ರಾರ್ಥಿಸುತ್ತಾ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು. ತೀವ್ರ ಭಾವುಕರಾದ ಅವರು ತಮ್ಮ ಜರ್ಸಿಯಿಂದ ಮುಖ ಮುಚ್ಚಿಕೊಂಡು ಕಣ್ಣೀರು ಹಾಕಿದರು. ಸಹ ಆಟಗಾರ ರಾಫಿನ್ಹಾ ಹಾಗೂ ವಿನೀಶಿಯಸ್ ಜೂನಿಯರ್ ಅವರು ನೇಮಾರ್ ಅವರನ್ನು ಅಪ್ಪಿಕೊಂಡು ಸಮಾಧಾನಪಡಿಸಲು ಯತ್ನಿಸಿದರೂ ಅವರ ದುಃಖ ತಡೆಯಲಾಗಲಿಲ್ಲ.
ವಿಶ್ವಕಪ್ ಮುನ್ನ ತೀವ್ರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನೇಮಾರ್, ಕಠಿಣ ಪುನರ್ವಸತಿಯ ನಂತರ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದರು. ಆದರೆ ಈ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಸಾಧ್ಯವಾಗದ ನೋವು ಅವರಲ್ಲಿ ಎದ್ದುಕಾಣುತ್ತಿತ್ತು.
ಪಂದ್ಯದ ಹೈಲೈಟ್ಸ್ಹಾಲಂಡ್ ಮಿಂಚು: ನಾರ್ವೆ ಪರ ದೈತ್ಯ ಸ್ಟ್ರೈಕರ್ ಎರ್ಲಿಂಗ್ ಹಾಲಂಡ್ ಪಂದ್ಯದ 79ನೇ ಮತ್ತು 90ನೇ ನಿಮಿಷದಲ್ಲಿ ಅದ್ಭುತ ಗೋಲುಗಳನ್ನು ಬಾರಿಸಿ ಬ್ರೆಜಿಲ್‌ಗೆ ಆಘಾತ ನೀಡಿದರು. ನೇಮಾರ್ ಕೊನೆಯ ಗೋಲು: ಪಂದ್ಯದ ಕಡೆಯ ಇಂಜುರಿ ಟೈಮ್‌ನಲ್ಲಿ (90+10') ಬ್ರೆಜಿಲ್‌ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ನೇಮಾರ್ ಇದನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದರೂ, ಅದು ಕೇವಲ ಸಾಂತ್ವನದ ಗೋಲು ಮಾತ್ರ ಆಗಿ ಉಳಿಯಿತು. ನಾರ್ವೆ 2-1 ರಲ್ಲಿ ಜಯಭೇರಿ ಬಾರಿಸಿತು.
ನೇಮಾರ್ ಭಾವುಕ ವಿದಾಯ
ಪಂದ್ಯದ ಬಳಿಕ ಮಾತನಾಡಿದ ನೇಮಾರ್, "ನಾನು ತುಂಬಾ ಪ್ರಯತ್ನಿಸಿದೆ, ಆದರೆ ಈಗ ಎಲ್ಲವೂ ಮುಗಿದಿದೆ. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನ ಎಲ್ಲಿ ಆರಂಭವಾಗಿತ್ತೋ (ಮೆಟ್‌ಲೈಫ್ ಸ್ಟೇಡಿಯಂ), ಅದೇ ಮೈದಾನದಲ್ಲಿ ಇಂದು ಕೊನೆಗೊಂಡಿದೆ," ಎಂದು ಅತ್ಯಂತ ಭಾವುಕರಾಗಿ ನುಡಿದರು. ನೇಮಾರ್ 2010 ರಲ್ಲಿ ಇದೇ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಅಮೆರಿಕ ವಿರುದ್ಧ ಆಡುವ ಮೂಲಕ ಬ್ರೆಜಿಲ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ನೇಮಾರ್ ಸಾರ್ವಕಾಲಿಕ ದಾಖಲೆಗಳು
ಬ್ರೆಜಿಲ್ ಫುಟ್‌ಬಾಲ್ ಇತಿಹಾಸದಲ್ಲಿ ನೇಮಾರ್ ಅತ್ಯಂತ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ:ಅತಿ ಹೆಚ್ಚು ಗೋಲು: ಬ್ರೆಜಿಲ್ ಪರ 130 ಪಂದ್ಯಗಳನ್ನಾಡಿರುವ ನೇಮಾರ್ 80 ಗೋಲುಗಳನ್ನು ಗಳಿಸಿ, ಶ್ರೇಷ್ಠ ಆಟಗಾರ ಪೀಲೆ (77 ಗೋಲು) ಅವರ ದಾಖಲೆಯನ್ನು ಮುರಿದು ಸಾರ್ವಕಾಲಿಕ ಅತಿ ಹೆಚ್ಚು ಗೋಲು ಬಾರಿಸಿದ ಬ್ರೆಜಿಲಿಯನ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಪ್ರಮುಖ ಪ್ರಶಸ್ತಿಗಳು:
ಬ್ರೆಜಿಲ್ ತಂಡದ ಪರವಾಗಿ ಅವರು 2013 ರ ಕಾನ್ಫೆಡರೇಷನ್ ಕಪ್ ಮತ್ತು 2016 ರ ರಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ವಿಶ್ವಕಪ್ ಟ್ರೋಫಿ ಗೆಲ್ಲಬೇಕೆಂಬ ನೇಮಾರ್ ಅವರ ಜೀವಮಾನದ ಕನಸು ಕೊನೆಯವರೆಗೂ ಈಡೇರದೆ ಉಳಿದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. 1990 ರ ನಂತರ ವಿಶ್ವಕಪ್ ನಾಕೌಟ್ ಹಂತದಲ್ಲಿ ಬ್ರೆಜಿಲ್ ಅನುಭವಿಸಿದ ಅತ್ಯಂತ ಮುಂಚಿತ ಸೋಲು ಇದಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ