ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ರಾಷ್ಟ್ರಪತಿ, ಪ್ರಧಾನಿ ಮೋದಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜಯಾ ಆಪ್ತೆ ಶಶಿಕಲಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಡಿಸೆಂಬರ್ 18 ರಂದು ಮೂವರು ನಾಯಕರಿಗೆ ಪ್ರತ್ಯೇಕ ಪತ್ರ ಬರೆದಿರುವ ಶಶಿಕಲಾ, ಚೆನ್ನೈಗೆ ಬಂದು ನಮ್ಮೆಲ್ಲರಿಗೂ ನೀವು ಹೇಳಿದ ಸಾಂತ್ವನದ ನುಡಿ ರಾಜ್ಯದ ಜನರಿಗೆ ಮತ್ತು ವೈಯಕ್ತಿಕವಾಗಿ ನನಗೆ ಸಮಾಧಾನ ಶಕ್ತಿ ತಂದಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ನಿನ್ನೆ ಎಐಡಿಎಂಕೆ ಮುಖ್ಯ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಲಾಯಿತು.
ಜಯಾ ನಿಧನ ಹೊಂದಿದ ದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚೆನ್ನೈಗೆ ಬಂದು ಅಗಲಿದ ನಾಯಕಿಗೆ ಅಂತಿಮ ನಮನ ಸಲ್ಲಿಸಿದ್ದರು.
ತಮಿಳುನಾಡಿನ ಜನರ ಪಾಲಿನ ಪ್ರೀತಿಯ ಅಮ್ಮ ಜಯಲಿತಾ ಡಿಸೆಂಬರ್ 5 ರಂದು ಹೃದಯಾಘಾತದಿಂದ ಮರಣವನ್ನಪ್ಪಿದ್ದರು. ಜಯಾ ನಿಧನದ ಬಳಿಕ ಪಕ್ಷವನ್ನು ಸಂಭಾಳಿಸುವಂತೆ ಎಐಡಿಎಂಕೆ ಪಕ್ಷದ ನಾಯಕರು ಶಶಿಕಲಾ ಅವರಿಗೆ ಒತ್ತಾಯಿಸುತ್ತಿದ್ದಾರೆ.