Publish Date: Wed, 08 Jul 2026 (13:39 IST)
Updated Date: Wed, 08 Jul 2026 (13:47 IST)
ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶ್ಚಿಮ ಬಂಗಾಳದ ಬರುಯಿಪುರ್ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮಂಡಲ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಆದರೆ, ಈ ಘಟನೆಯ ನಂತರ ಆತನ ಹೆತ್ತ ತಾಯಿ ನೀಡಿರುವ ಹೇಳಿಕೆ ಈಗ ಇಡೀ ದೇಶದ ಗಮನ ಸೆಳೆದಿದ್ದು, ಹೆತ್ತ ಕರುಳಿನ ತೀವ್ರ ನೋವು ಹಾಗೂ ಆಕ್ರೋಶಕ್ಕೆ ಸಾಕ್ಷಿಯಾಗಿದೆ.
ಆರೋಪಿ ಪ್ರಭಾಸ್ ಮಂಡಲ್ ಎನ್‌ಕೌಂಟರ್‌ನಲ್ಲಿ ಹತನಾದ ಸುದ್ದಿ ತಿಳಿಯುತ್ತಿದ್ದಂತೆ, ಆತನ ತಾಯಿಯನ್ನು ಮಾಧ್ಯಮಗಳು ಸಂಪರ್ಕಿಸಿದಾಗ ಅವರು ಅತ್ಯಂತ ಭಾವುಕರಾಗಿ ಮತ್ತು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ:
ಇಬ್ಬರು ಪೊಲೀಸರು ಬೆಳಿಗ್ಗೆ ನಮ್ಮ ಮನೆಗೆ ಬಂದಿದ್ದರು. ನಾನು ಆಗಷ್ಟೇ ಎದ್ದಿದ್ದೆ. 'ನಿಮ್ಮ ಮಗ ತೀರಿಕೊಂಡಿದ್ದಾನೆ, ಆಸ್ಪತ್ರೆಗೆ ಬರುತ್ತೀರಾ?' ಎಂದು ಕೇಳಿದರು. ನನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ನಾನು ಬರಲು ಸಾಧ್ಯವಿಲ್ಲ ಎಂದು ಹೇಳಿದೆ. 'ಆತ ಮಾಡಿದ ದುಷ್ಕೃತ್ಯಕ್ಕೆ ಆತನಿಗೆ ತಕ್ಕ ಶಿಕ್ಷೆಯಾಗಿದೆ. ಆತನಿಗೆ ಏನು ಬೇಕಾದರೂ ಮಾಡಿ, ನನಗೆ ಯಾವುದೇ ಅಭ್ಯಂತರವಿಲ್ಲ' ಎಂದು ಪೊಲೀಸರಿಗೆ ತಿಳಿಸಿದೆ.
ಆತ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ತಪ್ಪು ಮಾಡಿದ್ದಾನೆ, ಅದಕ್ಕೆ ಶಿಕ್ಷೆ ಅನುಭವಿಸಿದ್ದಾನೆ. ನಾನು ಆತನ ಮೃತದೇಹವನ್ನು ಸ್ವೀಕರಿಸುವುದಿಲ್ಲ, ನಮ್ಮ ಮನೆಗೂ ತರುವುದಿಲ್ಲ. ಆತನನ್ನು ಕಲ್ಲಿ, ಏನು ಬೇಕಾದರೂ ಮಾಡಿ, ನನಗೇನೂ ಬೇಸರವಿಲ್ಲ," ಎಂದು ತಾಯಿ ಕಣ್ಣೀರಿನಿಂದಲೇ ಆಕ್ರೋಶ ಹೊರಹಾಕಿದ್ದಾರೆ. ತಮ್ಮದೇ ಮಗನಾಗಿದ್ದರೂ, ಆತ ಎಸಗಿದ ಘೋರ ಅಪರಾಧವನ್ನು ಸಮರ್ಥಿಸಿಕೊಳ್ಳದೆ, ಆತನ ಮೃತದೇಹವನ್ನೂ ನಿರಾಕರಿಸಿದ ತಾಯಿಯ ನಿರ್ಧಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. "ತಾಯಂದಿರು ಅಪರಾಧಿಗಳನ್ನು ಬೆಂಬಲಿಸಬಾರದು ಎಂಬುದಕ್ಕೆ ಈ ತಾಯಿಯ ನಿರ್ಧಾರದ ಮಾದರಿಯಾಗಿದೆ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಏನಿದು ಬರುಯಿಪುರ್ ಪ್ರಕರಣ?
ಬರುಯಿಪುರ್ ಪ್ರದೇಶದಲ್ಲಿ ನಡೆದ ಪೈಶಾಚಿಕ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣದಲ್ಲಿ ಪ್ರಭಾಸ್ ಮಂಡಲ್ ಪ್ರಮುಖ ಆರೋಪಿಯಾಗಿದ್ದ. ಸ್ಥಳ ಮಹಜರು ಮತ್ತು ತನಿಖೆಯ ವೇಳೆ ಪೊಲೀಸರ ವಶದಲ್ಲಿದ್ದ ಈತ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಥವಾ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದಾಗ ಸ್ವ-ರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ