Publish Date: Thu, 09 Jul 2026 (14:55 IST)
Updated Date: Thu, 09 Jul 2026 (14:58 IST)
ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸೋದೆಪುರ ಪ್ರದೇಶದ ಫ್ಯೂಚರ್ ಗೇಟ್ ಬಳಿ ಬುಧವಾರ ಬೆಳಿಗ್ಗೆ ಸಾರ್ವಜನಿಕರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. 33 ವರ್ಷದ ಗೀತಾ ದಾಸ್ ಎಂಬ ಮಹಿಳೆಯನ್ನು ಆಕೆಯ ಪತಿ ಪ್ರಭಾಸ್ ದಾಸ್ (ಕೆಲವು ವರದಿಗಳ ಪ್ರಕಾರ ಸುಭಾಸ್ ದಾಸ್) ಸಾರ್ವಜನಿಕರ ಕಣ್ಣೆದುರಲ್ಲೇ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಘಟನೆಯ ನಂತರ ಆರೋಪಿಯು ತನ್ನ ಹೊಟ್ಟೆಗೆ ತಾನೇ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಬೆಳಗಿನ ಜಾವ ಸೋದೆಪುರ ರತ್ನಿಂದ್ರ ಸಿನೆಮಾ ಹಾಗೂ ಫ್ಯೂಚರ್ ಗೇಟ್ ಪ್ರದೇಶದಲ್ಲಿ ಗೀತಾ ದಾಸ್ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಪ್ರಭಾಸ್ ದಿಢೀರನೆ ಆಕೆಯ ಮೇಲೆ ತೀಕ್ಷ್ಣವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಮಹಿಳೆಯ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕೊಲೆಯನ್ನು ತಡೆಯಲು ಬಂದ ಸ್ಥಳೀಯರನ್ನು ಬೆದರಿಸಿದ ಆರೋಪಿ, ತಕ್ಷಣವೇ ಅದೇ ಆಯುಧದಿಂದ ತನ್ನ ಹೊಟ್ಟೆಗೆ ತಾನೇ ಇರಿದುಕೊಂಡಿದ್ದಾನೆ. ತೀವ್ರ ಗಾಯಗೊಂಡಿದ್ದ ಆರೋಪಿಯನ್ನು ತಕ್ಷಣವೇ ಪಾಣಿಹಾಟಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಆತನ ಸ್ಥಿತಿ ಚಿಂತಾಜನಕವಾದ್ದರಿಂದ ಸಾಗೋರ್ ದತ್ತಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಪೋಲಿಸ್ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೋಲಿಸ್ ಮೂಲಗಳ ಪ್ರಕಾರ, ದಂಪತಿಗಳ ನಡುವೆ ಕಳೆದ ಕೆಲವು ಸಮಯದಿಂದ ತೀವ್ರ ರೀತಿಯ ವೈವಾಹಿಕ ಭಿನ್ನಾಭಿಪ್ರಾಯ ಮತ್ತು ಕೌಟುಂಬಿಕ ಕಲಹಗಳಿದ್ದವು. ಇದರಿಂದ ಬೇಸತ್ತ ಗೀತಾ ದಾಸ್, ಪತಿಯಿಂದ ದೂರವಾಗಿ ಸೋದೆಪುರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬ್ಯಾರಕ್‌ಪೂರ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ