Publish Date: Wed, 02 Sep 2026 (17:45 IST)
Updated Date: Wed, 02 Sep 2026 (17:50 IST)
ಇಂದಾಪುರ (ಪುಣೆ): ತಾಯಿಯ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡಿದ್ದಕ್ಕೆ ಆಕ್ರೋಶಗೊಂಡ ಇಬ್ಬರು ಪುತ್ರರು, ತಮ್ಮ ವೃದ್ಧ ತಂದೆ-ತಾಯಿಯ ಮೇಲೆ ಮರದ ಕೋಲು ಮತ್ತು ಕೈಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘೋರ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತರಂಗವಾಡಿ ಗ್ರಾಮದ ಬಳಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವೃದ್ಧ ತಂದೆ ತುಕಾರಾಮ್ ಕಿಸನ್ ರಾವುತ್ (65) ನೀಡಿದ ದೂರಿನ ಮೇರೆಗೆ, ಇಂದಾಪುರ ಪೊಲೀಸರು ಅವರ ಇಬ್ಬರು ಪುತ್ರರಾದ ಸಂಜಯ್ ತುಕಾರಾಮ್ ರಾವುತ್ ಮತ್ತು ರಾಜೇಂದ್ರ ತುಕಾರಾಮ್ ರಾವುತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದಾಪುರದ ಸರಸ್ವತಿನಗರದ ನಿವಾಸಿಯಾದ ತುಕಾರಾಮ್ ರಾವುತ್ ಹಾಗೂ ಅವರ ಪತ್ನಿ ಅಂಜನಾ ಅವರು ಆಗಸ್ಟ್ 30 ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಸಲೀಮ್ ಲಾನ್ಸ್ ಬಳಿಯ ಡಾಂಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟಾಟಾ ನೆಕ್ಸಾನ್ ಕಾರಿನಲ್ಲಿ ಬಂದ ಇಬ್ಬರು ಆರೋಪಿ ಪುತ್ರರು ತಮ್ಮ ಹೆತ್ತವರನ್ನು ತಡೆದು ನಿಲ್ಲಿಸಿದ್ದಾರೆ.
ತಾಯಿ ಅಂಜನಾ ಅವರ ಹೆಸರಿನಲ್ಲಿದ್ದ ಆಸ್ತಿ/ಜಮೀನನ್ನು ತಮಗೆ ತಿಳಿಸದೆ ಏಕೆ ಮಾರಾಟ ಮಾಡಿದ್ದೀರಿ ಎಂದು ಇಬ್ಬರೂ ಪುತ್ರರು ತಂದೆ-ತಾಯಿಯೊಂದಿಗೆ ಗಲಾಟೆ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ, ಆರೋಪಿಗಳು ತಮ್ಮ ಕೈಯಲ್ಲಿದ್ದ ಮರದ ಕೋಲಿನಿಂದ ವೃದ್ಧ ದಂಪತಿಯ ಮೇಲೆ ಎರಗಿ, ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಕೆಟ್ಟ ಮಾತುಗಳಿಂದ ನಿಂದಿಸಿ, "ಮಾರಾಟ ಮಾಡಿದ ಜಮೀನನ್ನು ತಕ್ಷಣವೇ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ನಾವು ಏನೆಂಬುದನ್ನು ತೋರಿಸುತ್ತೇವೆ" ಎಂದು ಪ್ರಾಣ ಬೆದರಿಕೆ ಒಡ್ಡಿದ್ದಾರೆ.
ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಜೀವಮಾನದ ಗಳಿಕೆಯನ್ನೆಲ್ಲ ತ್ಯಾಗ ಮಾಡುತ್ತಾರೆ. ಆದರೆ ಆಸ್ತಿಯ ಆಸೆಗೆ ಬಿದ್ದು, ಹೆತ್ತ ತಂದೆ-ತಾಯಿಯ ಮೇಲೆಯೇ ಹಲ್ಲೆ ನಡೆಸಿದ ಪುತ್ರರ ಕೃತ್ಯಕ್ಕೆ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಂದಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ