ನವದೆಹಲಿ: ಭಾರತೀಯ ರೈಲ್ವೆಯು ಇತಿಹಾಸದಲ್ಲಿ ಮತ್ತೊಂದು ಸುವರ್ಣಾಕ್ಷರದ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಿಂದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿದರು.
ಈ ಅತ್ಯಾಧುನಿಕ ಸ್ಲೀಪರ್ ರೈಲು ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಂನ ಗುವಾಹಟಿಯ ಕಾಮಾಖ್ಯ ನಡುವೆ ಸಂಚರಿಸಲಿದ್ದು, ಪ್ರಯಾಣಿಕರಿಗೆ ವಿಮಾನದ ಮಾದರಿಯ ಪ್ರೀಮಿಯಂ ಸೌಕರ್ಯಗಳನ್ನು ಒದಗಿಸಲಿದೆ.
ಈ ರೈಲು ಒಟ್ಟು 16 ಎಸಿ ಕೋಚ್‌ಗಳಿದ್ದು, ಇದರಲ್ಲಿ 11 ಎಸಿ-3 ಟೈರ್, 4 ಎಸಿ-2 ಟೈರ್ ಮತ್ತು 1 ಫಸ್ಟ್ ಎಸಿ ಕೋಚ್‌ಗಳಿವೆ. ಒಟ್ಟು 823 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಗರಿಷ್ಠ 160 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ರೈಲುಗಳ ನಡುವಿನ ಡಿಕ್ಕಿ ತಪ್ಪಿಸಲು ಸ್ವದೇಶಿ 'ಕವಚ್' ತಂತ್ರಜ್ಞಾನ ಅಳವಡಿಸಲಾಗಿದೆ. ಮೆತ್ತನೆಯ ಬರ್ತ್‌ಗಳು, ಪ್ರತಿ ಸೀಟಿಗೆ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ಮತ್ತು ಫೋಲ್ಡಬಲ್ ಸ್ನ್ಯಾಕ್ ಟೇಬಲ್‌ಗಳಿವೆ.
ವಿಮಾನದ ಮಾದರಿಯ ಬಯೋ-ವ್ಯಾಕ್ಯೂಮ್ ಶೌಚಾಲಯಗಳಿದ್ದು, ಮೊದಲ ದರ್ಜೆ ಎಸಿ ಕೋಚ್‌ನಲ್ಲಿ ಬಿಸಿ ನೀರಿನ ಶವರ್ ಸೌಲಭ್ಯವೂ ಇದೆ. ಪ್ರಯಾಣಿಕರಿಗೆ ಅವರವರ ಸಂಸ್ಕೃತಿಗೆ ಅನುಗುಣವಾಗಿ ಆಹಾರ ನೀಡಲಾಗುವುದು. ಗುವಾಹಟಿಯಿಂದ ಹೊರಡುವ ರೈಲಿನಲ್ಲಿ ಅಸ್ಸಾಮಿ ಖಾದ್ಯ ಹಾಗೂ ಹೌರಾದಿಂದ ಹೊರಡುವ ರೈಲಿನಲ್ಲಿ ಬಂಗಾಳಿ ರುಚಿಯ ಆಹಾರ ಸಿಗಲಿದೆ.
ಆಧುನಿಕ ಭಾರತದ ಸಾರಿಗೆ ಅಗತ್ಯಗಳನ್ನು ಪೂರೈಸಲು ಆಧುನಿಕ ಸೌಲಭ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲನ್ನು ತಯಾರಿಸಲಾಗಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಸ್ಲೀಪರ್ ರೈಲು ಆಗಿದ್ದು, ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನದಂತಹ ಅನುಭವವನ್ನು ನೀಡುತ್ತದೆ.
ಪ್ರಧಾನಿ ಮೋದಿ 2 ದಿನಗಳ ಕಾಲ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಪ್ರವಾಸದಲ್ಲಿದ್ದು, ಹಲವಾರು ರೈಲು ಮತ್ತು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಮಾಲ್ಡಾದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮೋದಿ 3,250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.