Publish Date: Wed, 02 Sep 2026 (11:06 IST)
Updated Date: Wed, 02 Sep 2026 (11:10 IST)
ಉತ್ತರ ಪ್ರದೇಶ (ಬಲ್ಲಿಯಾ): ಸಮಸ್ಯೆಗಳು ಎದುರಾದಾಗ ಧೃತಿಗೆಟ್ಟು ಹಿಂಜರಿಯುವವರ ನಡುವೆ, ಏಳೂವರೆ ವರ್ಷದ ಈ ಸಣ್ಣ ಬಾಲಕಿ ಇಡೀ ಸಮಾಜಕ್ಕೇ ಮಾದರಿಯಾಗಿದ್ದಾಳೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಗಿಣಿ ಎಂಬ ಈ ಪುಟಾಣಿಗೆ ಕೇವಲ 6 ತಿಂಗಳ ಮಗುವಿದ್ದಾಗ ನಡೆದ ರಸ್ತೆ ಅಪಘಾತವೊಂದು ಜೀವನಪರ್ಯಂತ ಮಾಸದ ಗಾಯವನ್ನು ನೀಡಿತ್ತು. ಆ ಭೀಕರ ಅಪಘಾತದಲ್ಲಿ ಆಕೆ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು.
ಇಂದು ರಾಗಿಣಿಗೆ 7 ವರ್ಷ. ವಯಸ್ಸು ಚಿಕ್ಕದಾದರೂ ಆಕೆಯ ಆತ್ಮಸ್ಥೈರ್ಯ ಮತ್ತು ಕಲಿಕೆಯ ಮೇಲಿರುವ ಒಲವು ಹಿಮಾಲಯಕ್ಕಿಂತ ದೊಡ್ಡದಾಗಿದೆ. ಶಾರೀರಿಕ ಸವಾಲು ಆಕೆಯ ಕನಸುಗಳಿಗೆ ಎಂದೂ ಅಡ್ಡಿಯಾಗಲಿಲ್ಲ.
ದಿನವೂ 400 ಮೀಟರ್ ಸಾಹಸಯಾತ್ರೆ
ರಾಗಿಣಿಯ ಮನೆಯಿಂದ ಶಾಲೆಗೆ ಸುಮಾರು 400 ಮೀಟರ್ ದೂರವಿದೆ. ಪ್ರತಿದಿನ ಬೆಳಿಗ್ಗೆ ಶಾಲೆಯ ಸಮವಸ್ತ್ರ ಧರಿಸಿ, ಬೆನ್ನಿಗೊಂದು ಬ್ಯಾಗ್ ಏರಿಸಿಕೊಂಡು, ಒಂದೇ ಕಾಲಿನಲ್ಲೇ ನೆಗೆಯುತ್ತಾ (Hop ಮಾಡುತ್ತಾ) ಆಕೆ ಶಾಲೆಗೆ ಸಾಗುವ ದೃಶ್ಯವನ್ನು ಕಂಡರೆ ಕಲ್ಲು ಮನಸ್ಸು ಕೂಡ ಕರಗಿ ನೀರಾಗುತ್ತದೆ. ಒಂದೇ ಕಾಲಿನಲ್ಲಿ ಅಷ್ಟು ದೂರ ಸಾಗುವುದು ಸುಲಭದ ಮಾತಲ್ಲ. ಆಯಾಸವಾದರೂ, ಕಾಲು ನೋವೆನಿಸಿದರೂ ಆಕೆ ಎಲ್ಲೂ ಧೃತಿಗೆಡುವುದಿಲ್ಲ.
"ನಾನು ಸೋಲೊಲ್ಲ" ಎಂಬ ಛಲ
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿರುವ ಮಕ್ಕಳು ಮನೆಯಿಂದ ಹೊರಬರಲು ಮುಜುಗರಪಡುತ್ತಾರೆ ಅಥವಾ ಧೃತಿಗೆಡುತ್ತಾರೆ. ಆದರೆ ರಾಗಿಣಿ ಹಾಗಲ್ಲ. "ನನಗೆ ಓದಬೇಕೆಂಬ ಆಸೆಯಿದೆ, ನಾನು ಶಾಲ ತಪ್ಪಿಸುವುದಿಲ್ಲ" ಎಂಬ ಆಕೆಯ ಛಲ, ಆಕೆಯ ದಾರಿಯಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಯನ್ನೂ ಮೆಟ್ಟಿ ನಿಲ್ಲುವಂತೆ ಮಾಡಿದೆ.
ರಾಗಿಣಿಯ ಈ ಅಪ್ರತಿಮ ಸಾಹಸ ಮತ್ತು ಶಿಕ್ಷಣದ ಮೇಲಿರುವ ಪ್ರೀತಿ ಸ್ಥಳೀಯರ ಕಣ್ಣಿನಲ್ಲಿ ನೀರು ತರಿಸಿದೆ. ಈ ಪುಟ್ಟ ಮಗುವಿನ ಆತ್ಮವಿಶ್ವಾಸಕ್ಕೆ ಧನ್ಯವಾದ ಹೇಳಲೇಬೇಕು. ಅಂಗವಿಕಲತೆ ಎಂಬುದು ಶರೀರಕ್ಕಷ್ಟೇ ಹೊರತು ಮನಸ್ಸಿಗಲ್ಲ ಎಂಬುದನ್ನು ಸಾಬೀತುಪಡಿಸುತ್ತಿರುವ ರಾಗಿಣಿಗೆ ಸೂಕ್ತ ಕೃತಕ ಕಾಲು (Artificial Leg) ಮತ್ತು ಸರ್ಕಾರಿ ನೆರವು ಸಿಗಲಿ, ಆಕೆಯ ಶಾಲೆಯ ಹಾದಿ ಸುಗಮವಾಗಲಿ ಎಂಬುದೇ ಎಲ್ಲರ ಹಾರೈಕೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ