ಬಿಜೆಪಿ ತ್ಯಜಿಸಿರುವ ಕ್ರಿಕೆಟರ್ ಪರಿವರ್ತಿತ ರಾಜಕಾರಣಿ, ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅಮೃತ್‌ಸರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ಸಿಧು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಅವರು ಆದಷ್ಟು ಬೇಗ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಪೋಷಣೆ ನೀಡಿದೆ.
ಇಬ್ಬರು ನಾಯಕರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ಸಿಧು ಪತ್ನಿ ನವಜೋತ್ ಕೌರ್ ಸದ್ಯ ಅಮೃತಸರ್ (ಪೂರ್ವ)ನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಕುರಿತು ಪ್ರತಿನಿಧಿಸಿರುವ ಕಾಂಗ್ರೆಸ್ ನಾಯಕರೊಬ್ಬರು, ಸಿಧು ಆದಷ್ಟು ಬೇಗ ಕಾಂಗ್ರೆಸ್ ಸೇರಬಹುದು. ಇನ್ನೆರಡು ದಿನಗಳೊಳಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗಲಿರುವ ಅವರು ಪಕ್ಷ ಸೇರುವ ದಿನಾಂಕ ಮತ್ತು ಪಕ್ಷದಲ್ಲಿ ಅವರ ಪಾತ್ರವನ್ನು ಅಂತಿಮಗೊಳಿಸುವ ಬಗ್ಗೆ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸೇರಿದ್ದ ಕೌರ್, ತಾವು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ.
ಸಿಧು ಮತ್ತು ಅವರ ಪತ್ನಿ ಇಬ್ಬರು ಬಿಜೆಪಿಯನ್ನು ತ್ಯಜಿಸಿದ್ದು, ರಾಜ್ಯಸಭಾ ಸಂಸದನ ಸ್ಥಾನಕ್ಕೂ ಸಿಧು ರಾಜೀನಾಮೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ