Publish Date: Wed, 02 Sep 2026 (11:43 IST)
Updated Date: Wed, 02 Sep 2026 (11:47 IST)
ಚೆನ್ನೈ: ತಮಿಳುನಾಡಿನ ಪ್ರಮುಖ ದೇವಾಲಯಗಳ ಪವಿತ್ರತೆ ಮತ್ತು ಪ್ರಶಾಂತತೆಯನ್ನು ಕಾಪಾಡುವ ಉದ್ದೇಶದಿಂದ, ದೇವಾಲಯಗಳ ಆವರಣದೊಳಗೆ ಸ್ಮಾರ್ಟ್‌ಫೋನ್ ಹಾಗೂ ಕ್ಯಾಮೆರಾ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೆಪ್ಟೆಂಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಇನ್ಮುಂದೆ ದೇವಾಲಯದೊಳಗೆ ರೀಲ್ಸ್ ಮಾಡುವುದು, ದೇವರ ವಿಗ್ರಹಗಳ ಫೋಟೋ-ವೀಡಿಯೋ ತೆಗೆಯುವುದು ಹಾಗೂ ಗಣ್ಯರ ಫೋಟೋ ಕ್ಲಿಕ್ಕಿಸುವುದಕ್ಕೆ ಸಂಪೂರ್ಣ ತಡೆ ಬಿದ್ದಿದೆ.
ಮದ್ರಾಸ್ ಹೈಕೋರ್ಟ್ ಆದೇಶದಂತೆ ಕ್ರಮ:
2022ರ ಡಿಸೆಂಬರ್ 2 ರಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಬೇಕೆಂದು ರಾಜ್ಯ ಸರ್ಕಾರ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನಿರ್ದೇಶನ ನೀಡಿತ್ತು. ಭಕ್ತಾದಿಗಳು, ಮುಖ್ಯವಾಗಿ ಯುವಜನರು ದೇವಾಲಯದೊಳಗೆ ಸೆಲ್ಫಿ, ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ವೀಡಿಯೋಗಳನ್ನು ಮಾಡಿ ಭಕ್ತಿಪೂರ್ವಕ ವಾತಾವರಣಕ್ಕೆ ಭಂಗ ತರುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ನೀಡಲಾಗಿತ್ತು. ಹೈಕೋರ್ಟ್ ಆದೇಶದನ್ವಯ ಇದೀಗ ತಮಿಳುನಾಡು ಸರ್ಕಾರ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.
ಹೊಸ ನಿಯಮಗಳ ಪ್ರಮುಖ ಮುಖ್ಯಾಂಶಗಳು:
ಕೌಂಟರ್‌ಗಳಲ್ಲಿ ಮೊಬೈಲ್ ಜಮೆ: ದೇವಾಲಯಕ್ಕೆ ಬರುವ ಭಕ್ತರು ತಮ್ಮ ಮೊಬೈಲ್ ಫೋನ್‌ಗಳನ್ನು ಒಳಗೊಯ್ಯುವಂತಿಲ್ಲ. ದೇವಾಲಯದ ಪ್ರವೇಶ ದ್ವಾರದಲ್ಲೇ ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, 5 ರೂಪಾಯಿ ಶುಲ್ಕ ಪಾವತಿಸಿ ಮೊಬೈಲ್ ಜಮೆ ಮಾಡಿ ಟೋಕನ್ ಪಡೆಯಬೇಕಾಗುತ್ತದೆ.
ವಿಐಪಿಗಳಿಗೂ ವಿನಾಯಿತಿ ಇಲ್ಲ: ದೇವಾಲಯದೊಳಗೆ ಯಾವುದೇ ಗಣ್ಯರು , ರಾಜಕಾರಣಿಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಭೇಟಿ ನೀಡಿದರೂ ಅವರ ಫೋಟೋ ಅಥವಾ ವೀಡಿಯೋ ತೆಗೆಯಲು ಅವಕಾಶವಿಲ್ಲ.
ಪೂಜಾ ಪವಿತ್ರತೆಗೆ ಆದ್ಯತೆ: ಗರ್ಭಗುಡಿ ಹಾಗೂ ದೇವರ ವಿಗ್ರಹಗಳ ಫೋಟೋ-ವೀಡಿಯೋ ಚಿತ್ರೀಕರಣವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕ್ಯಾಮೆರಾರಹಿತ ಫೋನ್‌ಗಳಿಗೆ ಸಡಿಲಿಕೆ: ಕ್ಯಾಮೆರಾ ಇಲ್ಲದ ಸಾಮಾನ್ಯ ಕೀಪ್ಯಾಡ್ ಫೋನ್‌ಗಳನ್ನು ಒಯ್ಯಲು ಕೆಲವು ಕಡೆ ವಿನಾಯಿತಿ ನೀಡಲಾಗಿದ್ದು, ಆದರೆ ಸ್ಮಾರ್ಟ್‌ಫೋನ್‌ಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ತಮಿಳುನಾಡಿನ ಮೀನಾಕ್ಷಿ ಅಮ್ಮನ್, ರಂಗನಾಥಸ್ವಾಮಿ, ಕಪಾಲಿಶ್ವರರ್ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಪ್ರಮುಖ ದೇವಾಲಯಗಳಲ್ಲಿ ಈ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕ ಧ್ವನಿವರ್ಧಕಗಳು ಹಾಗೂ ಮಾಹಿತಿ ಫಲಕಗಳ ಮೂಲಕ ಭಕ್ತರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿರ್ಧಾರಕ್ಕೆ ರಾಜ್ಯದ ಬಹುತೇಕ ಭಕ್ತಾದಿಗಳಿಂದ ಮತ್ತು ಪೂಜಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ