ಆನಂದಿ ಬೆನ್ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಕ್ಷದ ಮುಖಂಡರ ಜತೆ ಗುರುವಾರ ಸಮಾಲೋಚನೆ ನಡೆಸಿದ್ದು, ಇಂದು ಹೊಸ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಪಕ್ಷದ ಗುಜರಾತ್ ಉಸ್ತುವಾರಿ ದಿನೇಶ ಶರ್ಮ, ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ವಿ. ಸತೀಶ್, ಪಕ್ಷದ ಖಜಾಂಚಿ ಸುರೇಂದ್ರ ಪಟೇಲ್ ಸೇರಿದಂತೆ ಹಲವರ ಜೊತೆ ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷ ವಿಜಯ್ ರೂಪಾನಿ ಗುರುವಾರ ಮಾತುಕತೆ ನಡೆಸಿದರು.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ವೀಕ್ಷಕರಾದ ನಿತಿನ್ ಗಡ್ಕರಿ ಮತ್ತು ಸರೋಜ್ ಪಾಂಡೆ ನೇತೃತ್ವದಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳ ಸಭೆ ಶುಕ್ರವಾರ ಸಂಜೆ ನಡೆಯಲಿದೆ. ಮುಂದಿನ ಮುಖ್ಯಮಂತ್ರಿ ಹೆಸರನ್ನು ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ರೂಪಾನಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ, ಗುಜರಾತ್ ಸಂಪುಟ ದರ್ಜೆ ಸಚಿವ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯ್ ರೂಪಾನಿ, ವಿಧಾನಸಭಾ ಸ್ಪೀಕರ್ ಗಣಪತಿ ವಾಸವ್ ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದಾರೆ.
ಗುಜರಾತ್ ಚುನಾವಣೆ ಉತ್ತರ ಪ್ರದೇಶಕ್ಕಿಂತ ದೊಡ್ಡ ಚುನಾವಣಾ ಕಾಳಗವಾಗಿದ್ದು,ರಾಜ್ಯದಲ್ಲಿ ಕಳೆದುಕೊಳ್ಳುತ್ತಿರುವ ಹಿಡಿತವನ್ನು ಮರಳಿ ಗಳಿಸಲು ಪಕ್ಷದ ವರಿಷ್ಠರು ಕಾರ್ಯಪ್ರವೃತ್ತರಾಗಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಪ್ರಬಲ ಮತ್ತು ನಿರ್ಣಾಯಕ ನಾಯಕತ್ವದ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂದು ಸಂಘ ಬಿಜೆಪಿಗೆ ಸಲಹೆ ನೀಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.