Select Your Language

Notifications

webdunia
webdunia
webdunia
webdunia

ಸೂಪರ್ ಮೂನ್‌ನಿಂದ ಎಲ್ಲೂ, ಯಾರಿಗೂ, ಏನೂ ಆಗಿಲ್ಲ!

ಸೂಪರ್ ಮೂನ್
ನವದೆಹಲಿ , ಭಾನುವಾರ, 20 ಮಾರ್ಚ್ 2011 (09:51 IST)
ನಿನ್ನೆಯ ಹುಣ್ಣಿಮೆಯ ಸುಂದರ ದಿನ ನಮ್ಮ ಚಂದಿರ ಹತ್ತಿರ ಹತ್ತಿರಕ್ಕೆ ಬಂದು ಹೋಗಿದ್ದಾನೆ. ಹಲವು ಜ್ಯೋತಿಷಿಗಳ ಬುರುಡೆ ಭವಿಷ್ಯ ಇಂದು ಬೆಳಗಾಗುವ ಹೊತ್ತಿಗೆ ಸಂಪೂರ್ಣ ಸುಳ್ಳಾಗಿದೆ. ಜಪಾನ್‌ನಲ್ಲಿ ಸುನಾಮಿ ಸಂಭವಿಸಿದ್ದನ್ನೇ ಮುಂದಿಟ್ಟುಕೊಂಡು ಹೆದರಿಸಿದ್ದವರ ಜಾತಕ ಬಯಲಾಗಿದೆ. ಬಹುತೇಕ ವಿಜ್ಞಾನಿಗಳು ಹೇಳಿರುವ ಮಾತೇ ನಿಜವಾಗಿದೆ.
PTI

ಹೌದು. ಶನಿವಾರ ಚಂದ್ರ ಭೂಮಿಯ ಅತೀ ಸನಿಹದಿಂದ, ಅಂದರೆ 2,21,565 ಮೈಲು ದೂರದಿಂದ ಬಂದು ಹೋಗಿದ್ದಾನೆ. ಭಾರತೀಯ ಕಾಲಮಾನ ರಾತ್ರಿ 8.20ಕ್ಕೆ ಪೂರ್ಣ ಪ್ರಮಾಣದ ಚಂದ್ರ ಗೋಚರಿಸಿದ್ದಾನೆ. ಕೆಲವು ಜ್ಯೋತಿಷಿಗಳು ಮತ್ತು ವಿಜ್ಞಾನಿಗಳು ಹೇಳಿರುವಂತೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿರುವ ಯಾವುದೇ ವರದಿಗಳು ಇದುವರೆಗೆ ಬಂದಿಲ್ಲ.

ಚಂದ್ರ ಸಾಮಾನ್ಯವಾಗಿ ಕಾಣಿಸುವ ಗಾತ್ರಕ್ಕಿಂತ ಶೇ.10ರಷ್ಟು ದೊಡ್ಡ ಗಾತ್ರದಲ್ಲಿ ಹಾಗೂ ಶೇ.30ರಷ್ಟು ಹೆಚ್ಚು ಪ್ರಕಾಶಮಾನವಾಗಿ ನಿನ್ನೆ ಕಂಡಿದ್ದಾನೆ. ಇದು ಕಳೆದ 18 ವರ್ಷಗಳ ನಂತರ ಘಟಿಸಿರುವುದು ವಿಶೇಷವಾಗಿತ್ತು. ನಭೋಮಂಡಲವು ಶುಭ್ರವಾಗಿದ್ದುದರಿಂದ ಪೂರ್ಣ ಚಂದಿರನನ್ನು ಬಹುತೇಕ ಮಂದಿ ಕಣ್ತುಂಬಿಕೊಂಡಿದ್ದಾರೆ.

ಎಲ್ಲಾ ಹುಣ್ಣಿಮೆಗಳಂತೆ ಇದೊಂದು ಸಾಮಾನ್ಯ ಹುಣ್ಣಿಮೆ. ಭೂಮಿಗೆ ಎಂದಿಗಿಂತ ಕೊಂಚ ಹತ್ತಿರಕ್ಕೆ ಸರಿಯುವುದನ್ನು ಬಿಟ್ಟರೆ ಇದರಲ್ಲಿ ಯಾವುದೇ ವಿಶೇಷವಿಲ್ಲ ಎಂದು ಖಗೋಳಶಾಸ್ತ್ರಜ್ಞರು ಹೇಳಿದ ಹೊರತಾಗಿಯೂ, ಹಲವು ಮಂದಿ ತೀವ್ರ ಭೀತಿಗಳಿಗೆ ಮಾರು ಹೋಗಿದ್ದರು. ಜಪಾನ್‌ನಲ್ಲಿನ ಸುನಾಮಿಗೂ ಮೊದಲೇ ಹುಟ್ಟಿಕೊಂಡಿದ್ದ ಈ ಭೀತಿಯು, ಅದರ ಬಳಿಕ ತೀವ್ರ ರೂಪ ಪಡೆದುಕೊಂಡಿತ್ತು.

ಚಂದ್ರನು ಭೂಮಿಗೆ ಹತ್ತಿರವಾಗುವ ದಿನ, ಅಂದರೆ ಹುಣ್ಣಿಮೆಯಂದು ಸಮುದ್ರದಲ್ಲಿ ಉಬ್ಬರ ಹೆಚ್ಚುವುದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಚಂದ್ರನಲ್ಲಿ ನಡೆಯುವ ಈ ಪ್ರಕ್ರಿಯೆಯಿಂದಾಗಿ ಭೂಮಿಯಲ್ಲಿ ಜ್ವಾಲಾಮುಖಿ, ಭೂಕಂಪ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಕೆಲವರು ಅಂದಾಜಿಸಿದ್ದರು. ಗುರುತ್ವಾಕರ್ಷಣೆ ಹೆಚ್ಚುವುದರಿಂದ ಹೆಚ್ಚಿನ ಅಪಾಯಗಳಾಗಲಿವೆ ಎಂದು ಎಚ್ಚರಿಕೆ ನೀಡಿದ್ದರು.

Share this Story:

Follow Webdunia kannada