Select Your Language

Notifications

webdunia
webdunia
webdunia
webdunia

ಭಾರತ ಮೊಬೈಲ್ ಕ್ಷೇತ್ರದಲ್ಲಿ ದಾವೂದ್ ಇಬ್ರಾಹಿಂ ಹೂಡಿಕೆ?

ದಾವೂದ್ ಇಬ್ರಾಹಿಂ
ಮುಂಬೈ , ಸೋಮವಾರ, 21 ಮಾರ್ಚ್ 2011 (13:37 IST)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿರುವ 2ಜಿ ಹಗರಣದಲ್ಲಿ ದೊಡ್ಡ ದೊಡ್ಡ ಕುಳಗಳು ಸಿಕ್ಕಿ ಬಿದ್ದ ನಂತರ ಇದೀಗ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೂಡಿಕೆ ಮಾಡಿರುವ ಕುರಿತು ಶಂಕೆಗಳು ಹೆಚ್ಚಿವೆ. ಆತ ಕೋಟ್ಯಂತರ ರೂಪಾಯಿ ಹಣವನ್ನು ಬೇನಾಮಿ ಕಂಪನಿಗಳ ಮೂಲಕ ಹೂಡಿಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ಹೇಳಿವೆ.

ವಿದೇಶಿ ಬ್ಯಾಂಕುಗಳ ಮೂಲಕ ಭಾರತದ ಬ್ಯಾಂಕುಗಳಿಗೆ ಸುಮಾರು 27,141 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ಈಗಾಗಲೇ ಇಬ್ಬರು ಬ್ಯಾಂಕರುಗಳು ಮತ್ತು ಒಬ್ಬ ಕಾರ್ಪೊರೇಟ್ ಹಿರಿಯ ಎಕ್ಸಿಕ್ಯೂಟಿವ್ ಅಧಿಕಾರಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.

27,141 ಕೋಟಿ ರೂಪಾಯಿ ಹಣದಲ್ಲಿ ಭಾರೀ ಪ್ರಮಾಣದ ಹಣ ಮಾರಿಷಸ್ ಮೂಲಕ ಬಂದಿದ್ದು, ಹವಾಲಾ ಮತ್ತು ಬೇನಾಮಿ ಕಂಪನಿಗಳನ್ನು ಬಳಸಿಕೊಂಡು ದಾವೂದ್ ಇಬ್ರಾಹಿಂ ದೂರವಾಣಿ ಪರವಾನಗಿಗಳ ಮೇಲೆ ಹೂಡಿಕೆ ಮಾಡಿರಬಹುದು ಎಂದು ಜಾರಿ ನಿರ್ದೇಶನಾಲಯ ಶಂಕಿಸುತ್ತಿದೆ.

ಏಕೀಕೃತ ಪ್ರವೇಶ ಸೇವಾ ಪರವಾನಗಿಯಲ್ಲಿ (ಯುಎಎಸ್) ಭಾರೀ ಪ್ರಮಾಣದ ಹಣವು ಮಾರಿಷಸ್ ಮೂಲಕ ಬಂದಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಇವುಗಳ ಮೂಲವನ್ನು ಕೆದಕಿದಾಗ ದಾವೂದ್ ಭಾಗೀದಾರಿಕೆಯ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಇಲ್ಲಿ ಕಂಡು ಬಂದಿರುವ ಕಂಪನಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳಲು ನಾವು ಭಾರತೀಯ ರಿಸರ್ವ್ ಬ್ಯಾಂಕ್ ಸಹಕಾರವನ್ನು ಕೋರಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರಿಷಸ್‌ನ 17 ಹೂಡಿಕೆಯ ಕಂಪನಿಗಳು ಮತ್ತು ಬ್ಯಾಂಕುಗಳಿಂದ 7,911 ಕೋಟಿ, ಜಪಾನ್‌ನ ಏಳು ಕಂಪನಿಗಳು ಮತ್ತು ಬ್ಯಾಂಕುಗಳಿಂದ 5,223 ಕೋಟಿ, ಚೀನಾದ ಆರು ಕಂಪನಿಗಳು ಮತ್ತು ಬ್ಯಾಂಕುಗಳಿಂದ 5,223 ಕೋಟಿ, ಫಿನ್‌ಲೆಂಡ್‌ನ ಆರು ಕಂಪನಿಗಳಿಂದ 1,185.9 ಕೋಟಿ, ಸ್ವೀಡನ್‌ನ ಎರಡು ಕಂಪನಿಗಳಿಂದ 430.34 ಕೋಟಿ, ಫ್ರಾನ್ಸ್‌ನ ಎರಡು ಕಂಪನಿಗಳಿಂದ 93.9 ಕೋಟಿ ಹಾಗೂ ರಷ್ಯಾದ ಎರಡು ಕಂಪನಿಗಳಿಂದ 2,518 ಕೋಟಿ ರೂಪಾಯಿಗಳು ಭಾರತಕ್ಕೆ ಹರಿದು ಬಂದಿವೆ.

ಈ ಹಣದಲ್ಲಿ ಬಹುತೇಕ ಮೊತ್ತವು ದಾವೂದ್ ಇಬ್ರಾಹಿಂಗೆ ಸೇರಿರುವ ಸಾಧ್ಯತೆಗಳಿವೆ. ಆತ ಬೇನಾಮಿ ಕಂಪನಿಗಳ ಮೂಲಕ 2ಜಿ ತರಂಗಾಂತರದಲ್ಲಿ ಹೂಡಿಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಜಾರಿ ನಿರ್ದೇಶನಾಲಯ ಹೇಳುತ್ತಿದ್ದು, ತನಿಖೆ ಮುಂದುವರಿಸಿದೆ.

Share this Story:

Follow Webdunia kannada