ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಈಗಲೂ ವಿಐಪಿ ಟ್ರೀಟ್ಮೆಂಟ್ ಮುಂದುವರಿದಿದೆ ಎಂದು ಬಯಲಾಗಿದೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಏನು ಮಾಡಿದ್ರು ಗೊತ್ತಾ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಅನೇಕ ಬಾರಿ ಬಹಿರಂಗವಾಗಿದೆ. ಆಗೆಲ್ಲಾ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಲೇ ಇದೆ. ಹಲವು ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳೂ ಜೈಲಿಗೆ ದಾಳಿ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದೂ ಇದೆ.
ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಈಗ ಉಗ್ರರು, ರೌಡಿಗಳು ಜೈಲಿನೊಳಗೇ ವಿಐಪಿ ಟ್ರೀಟ್ಮೆಂಟ್ ಪಡೆಯುತ್ತಿರುವ ವಿಡಿಯೋಗಳು ಮತ್ತೆ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಇಂದು ಮಾಧ್ಯಮಗಳು ಪ್ರಶ್ನಿಸಿವೆ. ಆದರೆ ಇದಕ್ಕೆ ಸಿಎಂ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ನಾನು ಕೇಳಿ ಆಮೇಲೆ ಪ್ರತಿಕ್ರಿಯಿಸುವೆ ಎಂದು ಜಾರಿಕೊಂಡಿದ್ದಾರೆ. ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿರುವುದು ನೋಡಿದರೆ ಜೈಲಿನಲ್ಲಿ ಅಕ್ರಮಗಳಿಗೆ ತಡೆ ನೀಡುವವರೇ ಇಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಜೊತೆಗೆ ಜೈಲಿನ ಅಧಿಕಾರಿಗಳೇ ಇದಕ್ಕೆಲ್ಲಾ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.