Select Your Language

Notifications

webdunia
webdunia
webdunia
webdunia

ಕರ್ನಾಟಕದ ಖಾಯಂ ನಿವಾಸಿ ಪ್ರಮಾಣಪತ್ರಕ್ಕೆ ಬ್ರೇಕ್ ಹಾಕಿ: ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

Amit Shah
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ಖಾಯಂ ನಿವಾಸಿ ಪ್ರಮಾಣಪತ್ರ'  ನೀಡುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
 
ರಾಜ್ಯ ಸರ್ಕಾರದ ಈ ನಿರ್ಧಾರದ ಹಿಂದೆ ಗಂಭೀರ ರಾಜಕೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಅಂಶಗಳು ಅಡಗಿವೆ ಎಂದು ಅವರು ತಮ್ಮ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
 
ಬಾಂಗ್ಲಾದೇಶಿ ವಲಸಿಗರಿಗೆ ಪೌರತ್ವ ನೀಡುವ ಸಂಚು: ಕರ್ನಾಟಕದಲ್ಲಿ ಹುಟ್ಟಿದವರಿಗೆ ಖಾಯಂ ನಿವಾಸಿ ಪ್ರಮಾಣಪತ್ರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಇದರ ಮರೆಯಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರಿಗೆ ಕಾನೂನುಬದ್ಧ ದಾಖಲೆಗಳನ್ನು ಸೃಷ್ಟಿಸಿ, ಅವರನ್ನು ಇಲ್ಲಿನ ಮತದಾರರನ್ನಾಗಿ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ನೇರ ಆರೋಪ ಮಾಡಿದ್ದಾರೆ.
 
ಸೈಬರ್ ಸೆಂಟರ್‌ಗಳಲ್ಲಿ ಅಕ್ರಮ ದಾಖಲೆ ಸೃಷ್ಟಿ: ರಾಜ್ಯದ ಹಲವು ಸೈಬರ್ ಸೆಂಟರ್‌ಗಳ ಮೂಲಕ ಅಕ್ರಮವಾಗಿ ಜನನ ಪ್ರಮಾಣಪತ್ರಗಳು ಮತ್ತು ವಾಸಸ್ಥಳದ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ಮತದಾರರ ಪಟ್ಟಿಯ ದುರುಪಯೋಗ: ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಕೆಲವು ನಿರ್ದಿಷ್ಟ ಧಾರ್ಮಿಕ ಸ್ಥಳಗಳು ಹಾಗೂ ಮಸೀದಿಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ಕೂರಿಸಿ ಅಕ್ರಮವಾಗಿ ಹೆಸರುಗಳನ್ನು ನೋಂದಾಯಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
 
ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಶೀಲನೆ  ಪ್ರಕ್ರಿಯೆಯನ್ನು ಅಧಿಕೃತವಾಗಿ ನಡೆಸುತ್ತಿದೆ. ಹೀಗಿರುವಾಗ, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಪ್ರತ್ಯೇಕ ಹಾಗೂ ಸಮನಾಂತರವಾದ ಪರಿಶೀಲನಾ ಪ್ರಕ್ರಿಯೆಯನ್ನು ಆರಂಭಿಸಿದೆ.
 
ಶೋಭಾ ಕರಂದ್ಲಾಜೆ ಹೇಳಿದ್ದೇನು

"ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿಗಳನ್ನು ಗಾಳಿಗೆ ತೂರಿ, ರಾಜ್ಯ ಸರ್ಕಾರವು ತನ್ನದೇ ಆದ ಪ್ರತ್ಯೇಕ ನಿಯಮಗಳೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇಳಿದಿರುವುದು ಕಾನೂನುಬಾಹಿರ. ಇದು ಮತದಾರರಲ್ಲಿ ಮತ್ತು ಅಧಿಕಾರಿಗಳಲ್ಲಿ ತೀವ್ರ ಗೊಂದಲ ಮೂಡಿಸುತ್ತದೆ. ಮುಂಬರುವ ಚುನಾವಣೆಗಳನ್ನು ಗೆಲ್ಲುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ಈ ರೀತಿಯ ಅಕ್ರಮಗಳನ್ನು ಮಾಡಲಾಗುತ್ತಿದೆ."
 
ಬಿಹಾರ ಮತ್ತು ಪಶ್ಚಿಮ ಬಂಗಾಳ ಮಾದರಿಯ ತನಿಖೆಗೆ ಆಗ್ರಹ
ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಕೇಂದ್ರ ಚುನಾವಣಾ ಆಯೋಗವು ಕೈಗೊಂಡ ಮಾದರಿಯಲ್ಲೇ, ಕರ್ನಾಟಕದಲ್ಲೂ ಸ್ವತಂತ್ರ ವೀಕ್ಷಕರನ್ನು ನೇಮಿಸಿ ಹೊಸದಾಗಿ ಕಟ್ಟುನಿಟ್ಟಿನ ತನಿಖೆ ಮತ್ತು ಪರಿಶೀಲನೆ ನಡೆಸಬೇಕು ಎಂದು ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಲವ್ವರ್ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video