ಬೀದರ್: ವಿರೋಧಿಗಳಿಗೆ ನನ್ನ ಮಗ ಪ್ರತೀಕ್ ಮುಖ್ಯ ಅಲ್ಲ, ಆತನ ಹೆಸರಿನ ಮೂಲಕ ನನ್ನ ಹಣಿಯುವ ಕುತಂತ್ರ ಮಾಡುತ್ತಿದ್ದಾರೆ. ನಾನೇ ಅವರ ಮುಖ್ಯ ಟಾರ್ಗೆಟ್. ನನ್ನ ಮಗನಾಗಲಿ, ನಾನಾಗಲಿ ಏನೂ ತಪ್ಪು ಮಾಡಿಲ್ಲ ಎಂದು ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಹೇಳಿದರು.
ಮಹಾರಾಷ್ಟ್ರ ಉದಗೀರನ ನಾಮದೇವ್ ರಾಠೋಡ್ ಅವರ ಮಗಳೊಂದಿಗೆ ನನ್ನ ಮಗ ಪ್ರತೀಕ್ ಜೊತೆ 2023ರಲ್ಲಿ ನಿಶ್ಚಿತಾರ್ಥವಾಯಿತು. ಹುಡುಗ–ಹುಡುಗಿ ಪರಸ್ಪರ ಒಪ್ಪಿದ್ದರಿಂದ ಹಿರಿಯರ ಸಮ್ಮುಖದಲ್ಲಿ ಮುದುವೆಗೆ ನಿಶ್ಚಯಿಸಲಾಗಿತ್ತು. ಆದರೆ, ಯುವತಿ ಬೇರೊಬ್ಬ ಯುವಕನೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿರುವುದು ತಿಳಿಯಿತು. ಈ ವಿಚಾರವಾಗಿ ಅವರ ಮನೆಯವರನ್ನು ಕರೆಸಿ ಚರ್ಚಿಸಿ ಸಮಾಜದ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡದಿರಲು 2024ರ ನವೆಂಬರ್‌ನಲ್ಲಿ ನಿರ್ಧರಿಸಲಾಯಿತು.
ಮದುವೆಯಾದ ನಂತರ ಕೊನೆ ತನಕ ಬದುಕಬೇಕಾಗುತ್ತದೆ. ಸಂಶಯದಿಂದ ಜೀವನ ಸಾಗಿಸಲು ಆಗುವುದಿಲ್ಲ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಯಿತು ಎಂದು ವಿವರಿಸಿದರು. ಯುವತಿಯ ಚಾಟ್ ಸಂಭಾಷಣೆಯ ವಿವರ ತೋರಿಸಿದರು.
ಎರಡೂ ಕುಟುಂಬದವರ ಒಪ್ಪಿಗೆಯಿಂದ ಮದುವೆ ಕೈಬಿಡಲು ನಿರ್ಧರಿಸಲಾಗಿದೆ. ಆದರೆ, ಆ ಯುವತಿಗೆ ಏನು ಆಮಿಷವೊಡ್ಡಿದ್ದಾರೆ ಗೊತ್ತಿಲ್ಲ. ಅವರು ನನ್ನ ಮಗ, ನನ್ನ ಹಾಗೂ ಕುಟುಂಬದವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ
'ನನ್ನನ್ನು ಮುಗಿಸಬೇಕೆಂಬ ಒಂದೇ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಭಗವಂತ ಖೂಬಾ ಅವರು ನನ್ನ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ. ಅವರ ಕುತಂತ್ರದಿಂದಲೇ ನನ್ನ ಹಾಗೂ ನಮ್ಮ ಕುಟುಂಬ ಸದಸ್ಯರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಡಲಾಗಿದೆ' ಎಂದು ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಗಂಭೀರ ಆರೋಪ ಮಾಡಿದರು.