ಬೆಂಗಳೂರು: ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರು ಇನ್ನು ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ. ರಸ್ತೆರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸರ್ಕಾರ ನಿರ್ಧರಿಸಿದೆ.
ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಬಳಿಯ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ ಎಂದರು.
ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ, ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಛ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು ಎಂದರು.