ಬೆಂಗಳೂರು: ತಿಥಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗಡ್ಡಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಚನ್ನೇಗೌಡ, ತಿಥಿ ಚಿತ್ರದಲ್ಲಿ ಅಭಿನಯದ ನಂತರ ಗಡ್ಡಪ್ಪ ಎಂದೇ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು.
ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ, ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಆಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ತಿಥಿ ಸಿನಿಮಾದಲ್ಲಿ ಪಟಾಪಟಿ ಚಡ್ಡಿ, ಹಳೇ ಬನಿಯನ್ - ಶರ್ಟು ತೊಟ್ಟು, ನ್ಯಾಚುರಲ್ ಆಗಿ ಡೈಲಾಗ್ ಹೊಡೆದವರು ಗಡ್ಡಪ್ಪ. ಈ ಸಿನಿಮಾದ ಮೂಲಕ ಚನ್ನೇಗೌಡ ಅವರು ಗಡ್ಡಪ್ಪ ಎಂದೇ ಫೇಮಸ್ ಆದರು.
ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಿಥಿ, ಗಡ್ಡಪ್ಪನ ಸರ್ಕಲ್, ತಾತನ್ ತಿಥಿ ಮೊಮ್ಮಗನ ಪ್ರಸ್, ಹಾಲು - ತುಪ್ಪ, ತರ್ಲೇ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯತಿ ಮುಂತಾದ ಸಿನಿಮಾಗಳಲ್ಲಿ ಚನ್ನೇಗೌಡ ಅಲಿಯಾಸ್ ಗಡ್ಡಪ್ಪ ಅಭಿನಯಿಸಿದ್ದರು.