ಮುಂಬೈ: ವಿಶ್ವಕಪ್ ಗೆದ್ದ ಬಳಿಕ ಸಾಲು ಸಾಲು ಸಂದರ್ಶನಗಳು, ಮೀಡಿಯಾ ಪ್ರಶ್ನೆಗಳಿಂದ ಸುಸ್ತಾಗಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮನೆಗೆ ತೆರಳುವಾಗಲೂ ಮಾಧ್ಯಮಗಳು ಸುತ್ತುವರಿದಾಗ ಬೇಡ ಎಂದು ಕೈಯಾಡಿಸುತ್ತಾ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದಾರೆ.
ಡಿವೈ ಪಾಟೀಲ್ ಮೈದಾನದಲ್ಲಿ ಮೊನ್ನೆ ದಕ್ಷಿಣ ಆಫ್ರಿಕಾವನ್ನು ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸಾಲು ಸಾಲು ಸನ್ಮಾನಗಳು ನಡೆಯುತ್ತಿವೆ. ಮುಂಬೈನಿಂದ ನೇರವಾಗಿ ಮಹಿಳಾ ಕ್ರಿಕೆಟ್ ತಂಡ ಟ್ರೋಫಿ ಸಮೇತ ದೆಹಲಿಗೆ ಪ್ರಯಾಣ ಬೆಳೆಸಿತ್ತು.
ದೆಹಲಿಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿದ್ದರು. ಇದೀಗ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಮೃತಿ ಮಂಧಾನರನ್ನು ಕರೆದೊಯ್ಯಲು ಅವರ ಭಾವೀ ಪತಿ ಪಾಲಾಶ್ ಬಂದಿದ್ದರು. ಸ್ಮೃತಿಯನ್ನು ಕಂಡ ಕೂಡಲೇ ಮಾಧ್ಯಮಗಳು ಸುತ್ತುವರಿದಿವೆ.
ಈ ವೇಳೆ ಮಾಧ್ಯಮಗಳಿಗೆ ನಗುತ್ತಾ ಕೈ ಬೀಸಿದ ಸ್ಮೃತಿ ಮಂಧಾನ ಪ್ರತಿಕ್ರಿಯೆ ಕೇಳಿದಾಗ ಬೇಡ ಬೇಡ ಸಾಕು ಎಂದು ಕೈ ಸನ್ನೆ ಮಾಡಿ ಅಲ್ಲಿಂದ ಕಾರಿನಲ್ಲಿ ತೆರಳಿದ್ದಾರೆ. ಸಾಲು ಸಾಲು ಸಂದರ್ಶನಗಳಿಂದ ಅವರು ಸುಸ್ತಾದವರಂತೆ ಕಾಣುತ್ತಿದ್ದರು.