ಮುಂಬೈ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ದೇಶೀಯ ಕ್ರಿಕೆಟ್ ಟೂರ್ನಿ ಆಡುವಂತೆ ಒತ್ತಡ ಹೇರಲಾಗಿದೆಯೇ? ಈ ಪ್ರಶ್ನೆಗೆ ಬಿಸಿಸಿಐ ಮೂಲಗಳಿಂದ ಸ್ಪಷ್ಟನೆ ಬಂದಿದೆ.
2027 ರ ವಿಶ್ವಕಪ್ ವರೆಗೆ ಏಕದಿನ ಮಾದರಿಯಲ್ಲಿ ಆಡಬೇಕೆನ್ನುವ ಇರಾದೆ ಹೊಂದಿರುವ ರೋಹಿತ್-ಕೊಹ್ಲಿಗೆ ಬಿಸಿಸಿಐ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕು ಎಂದು ಒತ್ತಡ ಹೇರಲಾಗಿದೆ ಎಂಬ ಸುದ್ದಿಗಳಿತ್ತು. ಈ ಬಗ್ಗೆ ಈಗ ಬಿಸಿಸಿಐ ಮೂಲಗಳಿಂದಲೇ ಸ್ಪಷ್ಟನೆ ಸಿಕ್ಕಿದೆ.
ಇಬ್ಬರಿಗೂ ವಿಜಯ್ ಹಜಾರೆ ಟ್ರೋಫಿ ಆಡುವ ಆಯ್ಕೆ ನೀಡಲಾಗಿದೆಯಷ್ಟೇ ಹೊರತು ಒತ್ತಡವಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಹಾಗಿದ್ದರೂ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ವಿಜಯ್ ಹಜಾರೆ ಟ್ರೋಫಿಗೆ ಲಭ್ಯರಿರುವುದಾಗಿ ತಮ್ಮ ತಂಡಕ್ಕೆ ತಿಳಿಸಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಇತ್ತೀಚೆಗೆ ರಣಜಿ ಟ್ರೋಫಿ ಆಡಿದ್ದು ಬಿಟ್ಟರೆ ದೇಶೀಯ ಕ್ರಿಕೆಟ್ ನಲ್ಲಿ ಆಡಿ ಎಷ್ಟೋ ವರ್ಷಗಳೇ ಆಗಿವೆ. ಇದೀಗ ಏಕದಿನ ಸರಣಿಯಲ್ಲಿ ಮಾತ್ರ ಆಡುತ್ತಿರುವ ಈ ಇಬ್ಬರು ಕ್ರಿಕೆಟಿಗರಿಗೆ ದೇಶೀಯ ಕ್ರಿಕೆಟ್ ಆಡಲು ಹೇಳುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.