ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಲೋವರ್ ದಿರ್‌ನ ಮಾಯರ್ ಪ್ರದೇಶದಲ್ಲಿರುವ ನಸೀಮ್ ಶಾ ಮನೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯವಾಗಿ, ಗುಂಡಿನ ದಾಳಿ ನಡೆದ ಸಮಯದಲ್ಲಿ ನಸೀಮ್ ಶಾ ಅವರ ಕುಟುಂಬ ಮನೆಯಲ್ಲಿತ್ತು. ನಸೀಮ್ ಅವರ ಕಿರಿಯ ಸಹೋದರರಾದ ಹುನೈನ್ ಶಾ ಮತ್ತು ಉಬೈದ್ ಶಾ ಮನೆಯಲ್ಲಿದ್ದಾರಾ? ಅಥವಾ ಇಲ್ಲವಾ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಸೋಮವಾರ ಮುಂಜಾನೆ ಕ್ರಿಕೆಟಿಗ ನಸೀಮ್ ಶಾ ಅವರ ಮನೆಯ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮತ್ತು ನೆರೆಹೊರೆಯವರು ವರದಿ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಹಾಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಾಗಿ ಪಾಕಿಸ್ತಾನ ತಂಡದ ಜೊತೆಗಿರುವ ನಸೀಮ್ ಮನೆಗೆ ವಾಪಾಸ್ಸಾಲ್ಲ.
ಈ ಘಟನೆ ಬೆಳಗಿನ ಜಾವ 1:45ರ ಸುಮಾರಿಗೆ ನಡೆದಿದ್ದು, ದಾಳಿಕೋರರು ಮುಖ್ಯ ದ್ವಾರದಲ್ಲಿ ಹಲವು ಬಾರಿ ಗುಂಡುಗಳನ್ನು ಹಾರಿಸಿದ್ದು, ಮನೆಯಲ್ಲಿ ಗುಂಡುಗಳು ಬಿದ್ದಿವೆ. ಗುಂಡು ಹಾರಿಸಿದ ತಕ್ಷಣ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಈ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.
ಗುಂಡಿನ ದಾಳಿಗೆ ಆಸ್ತಿ ವಿವಾದ ಕಾರಣವಾಗಿರಬಹುದು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿವಾದ ಅಥವಾ ಸ್ಥಳೀಯ ದ್ವೇಷದ ಕಾರಣದಿಂದ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆಯಿಂದಾಗಿ ಈ ಪ್ರದೇಶದ ಶಾಂತಿಯುತ ವಾತಾವರಣ ಹದಗೆಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತೈಮೂರ್ ಖಾನ್ ತಿಳಿಸಿದ್ದಾರೆ.