ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಇಂದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ನೀಡಿದ ಜೀವದಾನಗಳೇ ವರವಾಗಿದೆ.
ಇಂದು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ. ಆರಂಭದಲ್ಲಿ ಮುಖ್ಯ ಬೌಲರ್ ಗಳು ಕೈ ಕೊಟ್ಟರು. ಜೊತೆಗೆ ಟೀಂ ಇಂಡಿಯಾ ಫೀಲ್ಡರ್ ಗಳು ಸತತವಾಗಿ ಕ್ಯಾಚ್ ಡ್ರಾಪ್ ಮಾಡಿದ್ದು ಕೊಂಚ ದುಬಾರಿಯಾಯಿತು. ಅಭಿಷೇಕ್ ಶರ್ಮಾ, ಕುಲದೀಪ್ ಯಾದವ್, ಶುಭಮನ್ ಗಿಲ್ ಕ್ಯಾಚ್ ಡ್ರಾಪ್ ಮಾಡಿದರು.
ಪಾಕಿಸ್ತಾನ ಪರ ಆರಂಭಿಕ ಫರ್ಹಾನ್ 58, ಸಾಯಿಮ್ ಅಯೂಬ್ 21, ಮೊಹಮ್ಮದ್ ನವಾಜ್ 21, ಫಹೀಂ ಅಶ್ರಫ್ 20 ರನ್ ಗಳಿಸಿದರು. ಒಂದು ಹಂತದಲ್ಲಿ ಪಾಕಿಸ್ತಾನ 10 ಓವರ್ ಗಳಲ್ಲಿ 90 ರನ್ ಗಳ ಗಡಿ ದಾಟಿತ್ತು. ಹೀಗಾಗಿ ದೊಡ್ಡ ಮೊತ್ತ ಗಳಿಸುವ ಸೂಚನೆಯಿತ್ತು.
ಆದರೆ ಕೊನೆಯ ಐದು ಓವರ್ ಗಳಲ್ಲಿ ಲಯಕ್ಕೆ ಬಂದ ಟೀಂ ಇಂಡಿಯಾ ಬೌಲರ್ ಗಳು ಪಾಕಿಸ್ತಾನವನ್ನು 170 ರನ್ ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ಶಿವಂ ದುಬೆ 2, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.