ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮೊದಲ ಮಗುವಿಗೆ ಜನ್ಮವಿತ್ತಿದ್ದು, ಈ ವಿಚಾರವನ್ನು ಪತಿ ವಿಕ್ಕಿ ಕೌಶಾಲ್ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ನಮ್ಮ ಸಂತೋಷದ ಕ್ಷಣ ಬಂದಿದೆ. ನಾವು ಗಂಡು ಮಗುವನ್ನು ಬರಮಾಡಿಕೊಂಡಿದ್ದೇವೆ ಎಂದು ವಿಕ್ಕಿ ಕೌಶಾಲ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮೊನ್ನೆಯಷ್ಟೇ ಸೆಪ್ಟೆಂಬರ್ ನಲ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದರು. 2021 ರಲ್ಲಿ ಕತ್ರಿನಾ ಮತ್ತು ವಿಕ್ಕಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಕಳೆದ ವರ್ಷ ಕತ್ರಿನಾ ಕೈಫ್ ಸಂತಾನ ಭಾಗ್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಆಶ್ಲೇಷ ಪೂಜೆ, ನಾಗ ಸೇವೆ ಮಾಡಿಕೊಂಡು ಹೋಗಿದ್ದರು. ಇದಾಗಿ ಕೆಲವೇ ಸಮಯದಲ್ಲಿ ದಂಪತಿ ಮೊದಲ ಮಗುವಿನ ಆಗಮನದ ವಿಚಾರ ಹಂಚಿಕೊಂಡಿದ್ದರು.